ನ.1ರಿಂದ ಜಿಬಿಎ ವ್ಯಾಪ್ತಿಯಲ್ಲಿ ‘ವಾರ್ಡ್ ಒನ್ ಅಭಿಯಾನ’ : ಸಚಿವ ಕೃಷ್ಣಬೈರೇಗೌಡ
ಬೆಂಗಳೂರು : ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ನವೆಂಬರ್ 1ರಿಂದ ‘ವಾರ್ಡ್ ಒನ್’ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಬುಧವಾರ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಹದಗೆಟ್ಟಿದ್ದು, ಅವುಗಳನ್ನು ದುರಸ್ತಿಪಡಿಸುವ ಅಗತ್ಯವಿದೆ ಎಂದರು.
ಇದರೊಂದಿಗೆ ವಾರ್ಡ್ಗಳಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದು, ಸ್ವಚ್ಛತೆ, ದುರಸ್ತಿ ಕಾರ್ಯಗಳು ಹಾಗೂ ಸೌಂದರ್ಯೀಕರಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಜಿಬಿಎ, ಐದು ನಗರ ಪಾಲಿಕೆಗಳು ಹಾಗೂ ಇತರೆ ಸರಕಾರಿ ಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ 1ರಿಂದ ‘ವಾರ್ಡ್ ಒನ್’ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಆಯಾ ನಗರ ಪಾಲಿಕೆಗಳ ವ್ಯಾಪ್ತಿಯ ಪ್ರತಿ ವಿಭಾಗದಿಂದ ಒಂದು ವಾರ್ಡ್ನ್ನು ಆಯ್ಕೆ ಮಾಡಿಕೊಂಡು, ಆ ವಾರ್ಡ್ನಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಕಾರ್ಯ ಕೈಗೊಳ್ಳಲಾಗುವುದು. ನವೆಂಬರ್ 1ರಂದು ಪ್ರತಿ ವಿಭಾಗದಿಂದ ಒಂದೊಂದು ವಾರ್ಡ್ನ್ನು ಆಯ್ಕೆ ಮಾಡಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಆ ವಾರ್ಡ್ನಲ್ಲಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಆಯ್ಕೆ ಮಾಡಲಾದ ವಾರ್ಡ್ಗಳಲ್ಲಿ ಪ್ರಮುಖವಾಗಿ ರಸ್ತೆ ಮತ್ತು ಜಂಕ್ಷನ್ಗಳ ದುರಸ್ತಿ, ತೀವ್ರ ಸ್ವಚ್ಛತಾ ಕಾರ್ಯ, ವಾರ್ಡ್ನಾದ್ಯಂತ ಸ್ವಚ್ಛತೆ ಕಾಪಾಡುವುದು, ಪಾದಚಾರಿ ಮಾರ್ಗಗಳ ಕರ್ಬ್ಸ್ಟೋನ್ಗಳು ಹಾಗೂ ಸ್ಲ್ಯಾಬ್ಗಳ ದುರಸ್ತಿ, ಒಳಚರಂಡಿ ಚೇಂಬರ್ಗಳ ಮೇಲ್ಭಾಗದ ಮುಚ್ಚಳಗಳ ದುರಸ್ತಿ, ಬೀದಿ ದೀಪಗಳ ದುರಸ್ತಿ, ಮರದ ಒಣ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವುದು ಹಾಗೂ ಸಣ್ಣಪುಟ್ಟ ತ್ಯಾಜ್ಯ/ಮಣ್ಣು ಗುಡ್ಡೆಗಳು ಮತ್ತು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಇದರೊಂದಿಗೆ ಬೆಸ್ಕಾಂನ ವಿದ್ಯುತ್ ಕಂಬಗಳು ಹಾಗೂ ಆರ್ಎಂಯು ಘಟಕಗಳ ಸ್ಥಳಾಂತರ ಅಥವಾ ದುರಸ್ತಿ, ಜಲಮಂಡಳಿಯ ನೀರಿನ ಸೋರಿಕೆ ತಡೆಗಟ್ಟುವುದು ಮತ್ತು ಅಗತ್ಯವಿರುವಲ್ಲಿ ಪೈಪ್ಗಳ ದುರಸ್ತಿ ಅಥವಾ ತೆರವು ಸೇರಿದಂತೆ ವಾರ್ಡ್ಗಳ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನವೆಂಬರ್ ತಿಂಗಳ ಅಂತ್ಯದೊಳಗೆ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ರಸ್ತೆಗಳು ಹಾಗೂ ಜಂಕ್ಷನ್ಗಳ ದುರಸ್ತಿ ಮತ್ತು ಅಭಿವೃದ್ಧಿಯಿಂದ ಸಂಚಾರ ದಟ್ಟಣೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಜಂಕ್ಷನ್ಗಳ ದುರಸ್ತಿ ಹಾಗೂ ಸುಧಾರಣಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ವಿಭಾಗವಾರು ಸಮಿತಿಗಳ ರಚನೆ: ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿಭಾಗವಾರು ಅಧಿಕಾರಿಗಳ ಸಮಿತಿಗಳನ್ನು ರಚಿಸಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲಾಗುವುದು. ಅಭಿಯಾನ ಆರಂಭವಾದ ಬಳಿಕ ಆಯ್ಕೆ ಮಾಡಲಾದ ವಾರ್ಡ್ನಲ್ಲಿನ ಸ್ವಚ್ಛತಾ ಕಾರ್ಯಗಳು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಬೇಕಾಗುವ ಸಮಯವನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ನಿಖರವಾದ ಕಾರ್ಯಯೋಜನೆ ರೂಪಿಸಿ ಅನುಷ್ಠಾ ನಗೊಳಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಪ್ರತಿ ವಾರ್ಡ್ನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ವಾರ್ಡ್ ಅಧಿಕಾರಿಗಳಿಗೆ ಪರಿಶೀಲನಾ ಪಟ್ಟಿಯನ್ನು ನೀಡಲಾಗುವುದು. ವಾರ್ಡ್ ಸಹಾಯಕ ಇಂಜಿನಿಯರ್ಗಳು, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ಗಳು ಈ ಪಟ್ಟಿಯ ಆಧಾರದ ಮೇಲೆ ವಾರ್ಡ್ನ ರಸ್ತೆಗಳನ್ನು ಪರಿಶೀಲಿಸಿ, ಅಲ್ಲಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಇಲಾಖೆಗಳ ವಿವರಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಬೇಕು. ನಂತರ ಸಿದ್ಧಪಡಿಸಿದ ಪಟ್ಟಿಯ ಆಧಾರದ ಮೇಲೆ, ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಯೋಜನಾಬದ್ಧವಾಗಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ.ಜಗದೀಶ್, ಡಾ.ರಾಜೇಂದ್ರ ಕೆ.ವಿ., ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಕರೀಗೌಡ, ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಹಾಗೂ ಮೋನ ರೋಟ್, ಮುಖ್ಯ ಇಂಜಿನಿಯರ್ಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.