ಬೆಂಗಳೂರು : ವಿಧಾನ ಪರಿಷತ್ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಆಡಳಿತಾರೂಢ ಕಾಂಗ್ರೆಸ್ ಸರಕಾರದ ದುರಾಡಳಿತ, ರೈತ ವಿರೋಧಿ ಧೋರಣೆ ಹಾಗೂ ಭ್ರಷ್ಟ ನೀತಿಗಳಿಗೆ ಮತದಾರರು ನೀಡಿರುವ ನೇರ ಕಪಾಳಮೋಕ್ಷ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎನ್‍ಡಿಎ ಮೈತ್ರಿಕೂಟದ ನಾಲ್ಕೂ ಅಭ್ಯರ್ಥಿಗಳ ಜಯವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಹೋರಾಟಕ್ಕೆ ನಾಡಿನ ಜನತೆಯ ಆಶೀರ್ವಾದವಿದೆ ಎಂಬುದಕ್ಕೆ ಸ್ಪಷ್ಟ ದಿಕ್ಸೂಚಿ ಎಂದು ಬಣ್ಣಿಸಿದರು.

ಪದವೀಧರ-ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾದ ನಮೋಶಿ, ಎಸ್.ವಿ.ಸಂಕನೂರು, ಕೆ.ಎಂ.ಸುರೇಶ್ ಹಾಗೂ ಎ.ಪಿ.ರಂಗನಾಥ್ ಗೆಲುವು ಸಾಧಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು. ಜೆಡಿಎಸ್ ಕಾರ್ಯಕರ್ತರ ಸಮನ್ವಯತೆಯಿಂದ ಗೆಲುವು ಸಾಧ್ಯವಾಗಿದೆ. ‘2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಬೀಗುತ್ತಿದ್ದ ಸಿಎಂ, ಸಚಿವರ ಅಹಂಕಾರವನ್ನು ಮತದಾರರು ಮಣ್ಣುಪಾಲು ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ನಿತ್ಯ ಕೇವಲ ಬಾಯಿಮಾತಿನ ಭರವಸೆಗಳು ಮತ್ತು ಘೋಷಣೆಗಳಿಗೆ ಸೀಮಿತವಾಗಿರುವ ಈ ಸರಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಬಿಡದಿಯ ರೈತ ವಿರೋಧಿ ಭೂಸ್ವಾಧೀನ ನೀತಿ, ನೈಸ್ ಯೋಜನೆಯ ಅಕ್ರಮಗಳು, ಕೆಪಿಎಸ್‍ಸಿ ಹಗರಣಗಳು ಮತ್ತು ಯುವಜನತೆಗೆ ಮಾಡಿದ ಮೋಸ ಹಾಗೂ ಸ್ವತಃ ಸಿಎಂ ಹುಟ್ಟುಹಾಕಿದ ‘ಸ್ಟಿಂಗ್’ ಪ್ರಕರಣಗಳ ವಿರುದ್ಧ ಮತದಾರರು ತಮ್ಮ ಆಕ್ರೋಶವನ್ನು ಮತಗಳ ರೂಪದಲ್ಲಿ ಹೊರಹಾಕಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ದೇಶದ ಸಮಗ್ರ ಪ್ರಗತಿಗೆ ಪ್ರಧಾನಿ ಮೋದಿ ಕೊಡುಗೆ ಮತ್ತು ಅವರ ವರ್ಚಸ್ಸು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಪರಿಶ್ರಮ ಮತ್ತು ಜನರಲ್ಲಿದ್ದ ಅವರ ಮೇಲಿನ ಒಲವು ಈ ಗೆಲುವಿಗೆ ಪ್ರಮುಖ ಅಡಿಪಾಯ. 2028ರಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಅಭಿವೃದ್ಧಿಪರ ಆಡಳಿತ ಮರಳಿ ತರಬೇಕೆಂಬ ಸ್ಪಷ್ಟ ಸಂದೇಶವನ್ನು ಮತದಾರರು ನೀಡಿದ್ದಾರೆ ಎಂದು ಅವರು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor