ಹೊಸದಿಲ್ಲಿ : ದೇಶದ ಶ್ರೇಷ್ಟ ಸಂವಿಧಾನ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂ ಇರಲಿ, ಬ್ಯಾಲೆಟ್ ಪೇಪರ್.. ಬರಲಿ ಗೆಲುವು ಮಾತ್ರ ನಮ್ದೆ. ಕಾಂಗ್ರೆಸ್‍ನ ವೋಟ್ ಚೋರಿ, ಎಸ್‍ಐಆರ್ ಆರೋಪದ ನಡುವೆಯೂ ದೇಶದೆಲ್ಲೆಡೆ ನಡೆದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇಶದ ಎಲ್ಲೇ ಆಗಲಿ ಚುನಾವಣಾ ವ್ಯವಸ್ಥೆಯಲ್ಲಿ ಮತದಾನಕ್ಕೆ ಇವಿಎಂ ಬಳಸಲಿ ಅಥವಾ ಬ್ಯಾಲೆಟ್ ಪೇಪರ್ ಅನ್ನೇ ಬಳಸಲಿ ಫಲಿತಾಂಶ ಮಾತ್ರ ಒಂದೇ ಆಗಿರುತ್ತದೆ ಅದು ಬಿಜೆಪಿ ನೇತೃತ್ವದ ಎನ್‍ಡಿಎ ಗೆಲುವು ನಿಶ್ಚಿತ. ಈ ಬಾರಿ ದೇಶಾದ್ಯಂತ ನಡೆದ 28 ಎಂಎಲ್‍ಸಿ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೆ ಕಾಂಗ್ರೆಸ್ ಧೂಳಿಪಟವಾಗಿದೆ. ಇದಕ್ಕೆ ಆ ಪಕ್ಷದ ನೇತಾರರ ನಡವಳಿಕೆಗಳೇ ಕಾರಣ ಎಂದು ದೂರಿದರು.

ಕಾಂಗ್ರೆಸ್ ಸದಾ ‘ವೋಟ್ ಚೋರಿ' ಎಂಬ ಸುಳ್ಳು ಕಥೆ ಸೃಷ್ಟಿಸುತ್ತಾ ತನ್ನ ಅವನತಿ ತಾನೇ ತಂದುಕೊಳ್ಳುತ್ತಿದೆ. ಸಾಂವಿಧಾನಿಕ ಹುದ್ದೆಗಳ ಮೇಲೆ ಅಪಂಬಿಕೆ, ಅಗೌರವ ತೋರಿದ್ದಲ್ಲದೇ, ಚುನಾವಣಾ ಆಯೋಗವನ್ನೇ ದೂರುತ್ತಿತ್ತು. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಲ್ಲಗಳೆಯುವ ರೀತಿ ವಿರೋಧಾಭಾಸ ವ್ಯಕ್ತಪಡಿಸುತ್ತಿತ್ತು. ಇದಕ್ಕೆಲ್ಲ ಈಗ ಸ್ಪಷ್ಟ ಉತ್ತರ ಸಿಕ್ಕಿದೆ ಎಂದು ಜೋಶಿ ತಿಳಿಸಿದರು.

ಅಂಬೇಡ್ಕರ್‌ ರ ಸಂವಿಧಾನವನ್ನೇ ಪ್ರಶ್ನಿಸುವ ರೀತಿ ವರ್ತಿಸುತ್ತಿದ್ದ ಕಾಂಗ್ರೆಸ್ ಇದೀಗ ದೇಶದೆಲ್ಲೆಡೆ 28 ಕ್ಷೇತ್ರಗಳಲ್ಲಿ ಒಂದು ಸೀಟನ್ನೂ ಗೆಲ್ಲದೆ ಸೋಲಿಗೆ ಶರಣಾಗಿದೆ. ಕರ್ನಾಟಕ ರಾಜ್ಯದಲ್ಲಿ ಹಾಲಿ ಸದಸ್ಯರಿದ್ದ ಸ್ಥಾನವನ್ನೇ ಕಳೆದುಕೊಂಡಿದೆ. ಪದೇ ಪದೇ ಇವಿಎಂ ಬಗ್ಗೆ ಅಪಸ್ವರ ಎತ್ತುತ್ತಿತ್ತು. ಕೊನೆಗೆ ಆ ಪಕ್ಷದ ನಾಯಕರ ಒತ್ತಾಸೆಯಂತೆ ಬ್ಯಾಲೆಟ್ ಪೇಪರ್ ಅನ್ನೇ ಬಳಸಿ ಚುನಾವಣೆ ನಡೆಸಿದರೂ ಫಲಿತಾಂಶ ಮಾತ್ರ ಬದಲಾಗಿಲ್ಲ ಎಂದು ಜೋಶಿ ಟೀಕಿಸಿದರು..

ಆತ್ಮಾವಲೋಕನ ಮಾಡಿಕೊಳ್ಳಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತವರ ತಂಡ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ತಮ್ಮ ಸಾಲು-ಸಾಲು ಸೋಲುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜೋಶಿ ಸಲಹೆ ನೀಡಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor