ವಿಎಒ ಪರೀಕ್ಷೆಯಲ್ಲಿ ಹೆಚ್ಚು ಅಂಕ: ತನಿಖೆ ನಡೆಸಿ ವರದಿ ನೀಡಲು ಹಾವೇರಿ ಜಿಲ್ಲಾಧಿಕಾರಿಗೆ ಕೆಇಎ ಪತ್ರ
ಬೆಂಗಳೂರು : ಕೆಎಸ್ಆರ್ಪಿ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬ ಗ್ರಾಮ ಆಡಳಿತಾಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ 151 ಅಂಕಗಳನ್ನು ಹೇಗೆ ಪಡೆದ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಅನುಮಾನಗಳ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನಿಖೆಗೆ ಆದೇಶ ನೀಡಿದೆ.
ಈ ಕುರಿತು ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು, ಪರೀಕ್ಷಾ ಕೇಂದ್ರದಲ್ಲಿ ಏನಾದರು ಲೋಪಗಳು ಆಗಿವೆಯೇ ಎಂಬುದರ ಬಗ್ಗೆ ಸಿಸಿಟಿವಿ ವಿಡಿಯೊ ತುಣುಕುಗಳನ್ನು ನೋಡಿ, ಸಮಗ್ರವಾಗಿ ವಿಚಾರಣೆ ನಡೆಸಿ ವರದಿ ನೀಡಲು ಕೋರಿದ್ದಾರೆ. ಅಗತ್ಯವಿದ್ದರೆ ಪೊಲೀಸರಿಗೆ ದೂರು ಕೊಡುವಂತೆ ಸೂಚಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಅ.4ರಂದು ನಡೆದ ಗ್ರಾಮ ಆಡಳಿತಾಧಿಕಾರಿ (ವಿಎಒ) ಪರೀಕ್ಷೆಯನ್ನು ಅದೇ ಜಿಲ್ಲೆಯ ಶಂಕರ ಬನ್ನೂರು ಎಂಬುವರು ಬರೆದಿದ್ದಾರೆ. ಇವರ ಶೈಕ್ಷಣಿಕ ಹಿನ್ನೆಲೆ ಕೂಡ ಹೇಳಿಕೊಳ್ಳುವಂತಿಲ್ಲ. ಅಂತಹ ಅಭ್ಯರ್ಥಿ ಇಷ್ಟೊಂದು ಅಂಕ ಹೇಗೆ ಪಡೆದರು? ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಸಿದ್ದಾರೆ. ಈ ಅನುಮಾನಗಳಿಗೆ ಇತಿಶ್ರೀ ಹಾಡಲು ತನಿಖೆಯ ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅರ್ಜಿ ಹಾಕಿದ್ದ ಅಭ್ಯರ್ಥಿಯೇ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆದಿದ್ದಾರೆ. ಇದು ಮುಖ ಚಹರೆ ತಂತ್ರಜ್ಞಾನದ ಮೂಲಕ ದೃಢೀಕರಣ ಕೂಡ ಆಗಿದೆ. ಅಭ್ಯರ್ಥಿಗೆ ಕೊಟ್ಟಿರುವ ಒಎಂಅರ್ ಕೂಡ ಸರಿ ಇದೆ. ಅಲ್ಲದೆ ಅದೇ ಒಎಂಆರ್ ಅನ್ನು ಅ.5ರಂದು ಸ್ಕ್ಯಾನ್ ಮಾಡಿ ಕೆಇಎ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದಾರಚೆಗೆ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರು ಲೋಪಗಳು ಆಗಿವೆಯೇ ಎಂಬುದನ್ನು ಅಲ್ಲಿನ ಜಿಲ್ಲಾಧಿಕಾರಿಯೇ ಪರಿಶೀಲಿಸಿ ವರದಿ ನೀಡಬೇಕು ಎಂದು ತಿಳಿಸಿದ್ದಾರೆ.
ಅಭ್ಯರ್ಥಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವುದು 2013ರಲ್ಲಿ. ಇದು ವಿಎಒ ಹುದ್ದೆಗೆ ಅರ್ಜಿ ಹಾಕಿದ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ದತ್ತಾಂಶದ ಜತೆ ಆನ್ಲೈನ್ನಲ್ಲಿ ಹೊಂದಾಣಿಕೆ ಆಗಿದೆ. ಅದರೆ ಕೆಎಸ್ಆರ್ಪಿ ಅರ್ಜಿಯಲ್ಲಿ ಇದೇ ಅಭ್ಯರ್ಥಿ ತಾನು ಉತ್ತೀರ್ಣನಾಗಿದ್ದು 2026ರಲ್ಲಿ ಎಂದು ತಿದ್ದುಪಡಿ ಮಾಡಿಕೊಂಡಿರುವುದೂ ಪ್ರಾಧಿಕಾರದ ಸರ್ವರ್ನಲ್ಲಿ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲೋಪಗಳಿದ್ದರೆ ಕಠಿಣ ಕ್ರಮ: ಕಷ್ಟಪಟ್ಟು ಓದುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗಬಾರದೆಂದು ನೂರಕ್ಕೆ ನೂರು ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎರಡು ವರ್ಷಗಳಿಂದ ಒಎಂಆರ್ ಪ್ರತಿ ಸ್ಕ್ಯಾನ್ ಮಾಡಿ ವೆಬ್ಸೈಟ್ಗೆ ಹಾಕುವುದು ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆಯೂ ಏನಾದರು ಲೋಪಗಳಿದ್ದರೆ, ಅವುಗಳನ್ನು ಬಯಲಿಗೆಳೆದು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಈ ತನಿಖೆ ಸಹಕಾರಿಯಾಗಲಿದೆ. ಈ ಕಾರಣಕ್ಕೇ ತನಿಖೆಗೆ ಆದೇಶ ನೀಡಲಾಗಿದೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.