×
Ad

ಪೇಮೆಂಟ್ ಸೀಟ್ ಪಡೆದು ರಾಜ್ಯಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದು ಯಾಕೆ?: ವಿಜಯೇಂದ್ರಗೆ ಬಿ.ಕೆ.ಹರಿಪ್ರಸಾದ್‌ ಪ್ರಶ್ನೆ

Update: 2025-07-10 12:23 IST

ಬಿ.ಕೆ.ಹರಿಪ್ರಸಾದ್‌/ವಿಜಯೇಂದ್ರ

ಬೆಂಗಳೂರು : ಬಿಜೆಪಿಯಲ್ಲಿ ಕಾರ್ಯಕರ್ತ ಸ್ಥಾನವೇ ಮುಖ್ಯ ಎನ್ನುವುದಾದರೇ ಪೇಮೆಂಟ್ ಸೀಟ್ ಪಡೆದು ರಾಜ್ಯಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದು ಯಾಕೆ? ಎಂದು ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು, ವಿಜಯೇಂದ್ರರನ್ನು ಪ್ರಶ್ನಿಸಿದ್ದಾರೆ.

ಈ ಸಂಂಬಂಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ವಿಜಯೇಂದ್ರ ಅವರೇ, ಗಲಿಬಿಲಿಯಾಗಬೇಡಿ ಇದು ನಾನು ಮಾಡುತ್ತಿರುವ ಆರೋಪವಲ್ಲ, ನಿಮ್ಮದೇ ಪಕ್ಷದ ನಾಯಕರು ಕೊಡುತ್ತಿರುವ ಬಿರುದು-ಬಾವಲಿಗಳು ಎಂದು ವ್ಯಂಗ್ಯವಾಡಿದ್ದಾರೆ.

ನಾನು ಹಿಂಬಾಗಿಲಿನಿಂದ ವಿಧಾನಸಭೆಗೆ ಪ್ರವೇಶ ಮಾಡಿದ್ದು ನಿಜವೇ ಆಗಿದ್ದರೆ ನಿಮ್ಮ ತಂದೆ ಬಿ.ಎಸ್.ಯಡಿಯೂರಪ್ಪನವರು ಶಿಕಾರಿಪುರದಲ್ಲಿ ಸೋತು ಸುಣ್ಣವಾಗಿ 2000ರಿಂದ 2004ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದದ್ದು ಹಿಂಬಾಗಿಲಿನಿಂದಲೊ ಅಥವಾ "ಶೋಭಾ"ಯಾತ್ರೆ ಮೂಲಕವೂ ರಾಜ್ಯದ ಜನರಿಗೆ ತಿಳಿಸಿ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಪಕ್ಷದ ಶಿಸ್ತು-ಸಂಸ್ಕಾರದ ಬಗ್ಗೆ ಮಾತಾಡಲು ಪದಗಳು ಸಾಲದು. ನಿಘಂಟು, ಗ್ರಂಥಾಲಯಗಳನ್ನೇ ಸಂಶೋಧಿಸಬೇಕು. ನಿಮ್ಮ ಪಕ್ಷದ ಶಿಸ್ತು-ನಿಮ್ಮ ಕುಟುಂಬದ ತ್ಯಾಗ ಬಲಿದಾನ, ಹೊಂದಾಣಿಕೆ ರಾಜಕೀಯದ ಬಗ್ಗೆ ಇತ್ತೀಚಿಗೆ ದಾವಣಗೆರೆಯಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಜನ್ಮದಿನದ ಕಾರ್ಯಕ್ರಮದಲ್ಲಿ ನಿಮ್ಮ ಪಕ್ಷದ ಅತಿರಥ ಮಹಾರಥರು ಹಾಡಿ ಹೊಗಳಿದ್ದಾರೆ ಸಾಧ್ಯವಾದ್ರೆ ಕೇಳಿ ಎಂದು ಹೇಳಿದ್ದಾರೆ.

ಮಹಾಭಾರತದ ಕತೆಗಳನ್ನು ಹೇಳಿ ಕೈಗೆ ದೊಣ್ಣೆ ಕೊಟ್ಟು ಬಡಿಸಿಕೊಳ್ಳಬೇಡಿ. ಧರ್ಮರಾಯನಂತೆ ಆಸ್ತಿ-ಅಧಿಕಾರಕ್ಕಾಗಿ ದ್ರೌಪದಿಯನ್ನೇ ಜೂಜಿನಲ್ಲಿಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಂತೂ ಇಲ್ಲ, ನಿಮಿಗೂ ಅಂತಹ ದಾರಿದ್ರ್ಯ ಬರದೇ ಇರಲಿ. ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಅಧ್ಯಕ್ಷೆಯನ್ನಾಗಿಯೂ, ದೇಶದ ಮೊದಲ ಪ್ರಜೆಯಾಗಿಯೂ ನೀಡಿದ ಪರಂಪರೆ ಇದೆ. ಇತಿಹಾಸವೇ ಗೊತ್ತಿಲ್ಲದೇ ಎಳಸು ರಾಜಕಾರಣಿ ಎಂದು ಸಾಬೀತು ಪಡಿಸಿಕೊಳ್ಳಬೇಡಿ ಎಂದಿದ್ದಾರೆ.

ಅಷ್ಟಕ್ಕೂ ಮಹಿಳೆಯರ ಬಗ್ಗೆ ಬೊಗಳೆ ಮಾತಾಡುತ್ತಾ ಅನಗತ್ಯ ಮಾನ ಹರಾಜು ಮಾಡಿಕೊಳ್ಳಬೇಡಿ.ನಿಮ್ಮ ಪಕ್ಷದ ನಾಯಕರು ಜನಪ್ರತಿನಿಧಿಗಳು ಮಹಿಳಾ ರಾಜಕಾರಣಿಗಳನ್ನು, ಉನ್ನತ ಅಧಿಕಾರಿಗಳಿಗೆ ನೀಡಿದ ಗೌರವ ರಾಜ್ಯದ ಜನರು ನೋಡಿದ್ದಾರೆ. ನಾನು ಕ್ಷಮೆ‌ ಕೇಳುವುದು ನಂತರದ್ದೂ, ಮೊದಲು ಪೋಕ್ಸೋ ಕೇಸಿನಲ್ಲಿ ಜಾಮೀನಿನ ಮೇಲೆ ಹೊರಗಿರುವ ನಿಮ್ಮ ತಂದೆಯವರ ಕ್ಷಮೆ ಕೇಳಿಸಿ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News