×
Ad

"ಸಾಕ್ಷಿ, ದಾಖಲೆಗಳಿಲ್ಲದೆ ಪುಂಗುವುದನ್ನು ರೂಢಿ ಮಾಡಿಕೊಂಡಂತಿದೆ": ಪ್ರಕಾಶ್ ಬೆಳವಾಡಿ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು

Update: 2025-07-01 21:27 IST

ಪ್ರಕಾಶ್ ಬೆಳವಾಡಿ (credit: TOI) / ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಡಾ.ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಪ್ರಧಾನಮಂತ್ರಿ ಮಾಡಿದ್ದು, ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ನಟ ಪ್ರಕಾಶ್ ಬೆಳವಾಡಿ ನೀಡಿರುವ ಹೇಳಿಕೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಪ್ರಕಾಶ್ ಬೆಳವಾಡಿ ಮಾತನಾಡಿರುವ ವಿಡಿಯೋವನ್ನು ತಮ್ಮ ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡಿರುವ ಬಿ.ಕೆ.ಹರಿಪ್ರಸಾದ್, ‘ಏಳು ವರ್ಷದ ಬಾಲಕಿ ಮೇಲೆ ಶಾಸಕನ ತಮ್ಮನಿಂದ ಅತ್ಯಾಚಾರ ಆದರೂ, ಆತನ ಪರವಾಗಿ ವಾದ ಮಾಡುತ್ತಾ, ಕೋರ್ಟ್‍ನಲ್ಲಿ ಕಣ್ಣೀರು, ಕರುಣೆಗಿಂತಲೂ ಮುಖ್ಯವಾಗಿ ಬೇಕಿರುವುದು ಸಾಕ್ಷಿಗಳು ಎಂದು ‘ಯುದ್ಧಕಾಂಡ’ ಸಿನಿಮಾದಲ್ಲಿ ಡೈಲಾಗ್ ಹೊಡೆಯುವ ಪ್ರಕಾಶ್ ಬೆಳವಾಡಿಗೆ ನಿಜ ಜೀವನದಲ್ಲಿ ಮಾತನಾಡುವಾಗ ಸಾಕ್ಷಿ, ದಾಖಲೆಗಳಿಲ್ಲದೆ ಪುಂಗುವುದನ್ನು ರೂಢಿ ಮಾಡಿಕೊಂಡಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೋದಿಯ ಚಮಚಾಗಿರಿ ಮಾಡುತ್ತೇನೆ’ ಎಂದು ಬಹಿರಂಗವಾಗಿಯೇ ಘೋಷಿಸಿಕೊಂಡಿರುವ ಬೆಳವಾಡಿ, ಕನಿಷ್ಟ ಪಕ್ಷ ಮೋದಿ ಗುಜರಾತಿನಲ್ಲಿ ಶಾಸಕರಾಗಿ ಮುಖ್ಯಮಂತ್ರಿಯಾದರೋ, ಇಲ್ಲ ಮುಖ್ಯಮಂತ್ರಿಯಾದ ನಂತರ ಶಾಸಕರಾದರೋ ಎಂಬ ಕನಿಷ್ಟ ಇತಿಹಾಸವೂ ಗೊತ್ತಿಲ್ಲದೇ ಇರುವುದು ದುರಂತ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಸಂವಿಧಾನದಲ್ಲಿ ಪ್ರಧಾನಿಗಳ ಆಯ್ಕೆ, ಅಧಿಕಾರ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ವಿಧಿಗಳಿವೆ ಅದರ ಬಗ್ಗೆ ಎಳ್ಳಷ್ಟು ಬೆಳವಾಡಿಗೆ ತಿಳುವಳಿಕೆ ಇಲ್ಲ, ಜ್ಞಾನವಂತೂ ಇಲ್ಲವೇ ಇಲ್ಲ. ಭಾರತದ ಪ್ರಜೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದರೆ ದೇಶದ ಪ್ರಧಾನಿಯಾಗಲು ಅರ್ಹತೆ ಹೊಂದಿರುತ್ತಾರೆ. ಆದರೆ ನಿಮ್ಮಂತೆ ದಿವಾಳಿಯಂತೂ ಆಗಿರಬಾರದು ಎಂದು ಅವರು ಹೇಳಿದ್ದಾರೆ.

ಸಂವಿಧಾನದ ಪ್ರಖಂಡ ಪಂಡಿತರಂತೆ, ಕಾನೂನು ತಜ್ಞರಂತೆ ಸಂವಿಧಾನದ ವಿಧಿ, ವಿಧಾನಗಳು ಹಾಗೂ ಕಾನೂನುಗಳ ಬಗ್ಗೆ ವಾಚಾಮಗೋಚರ ಹಲುಬಿರುವ ಬೆಳವಾಡಿಗೆ ದೇಶದ ಮೂಲೆಯ ಯಾವ ಪ್ರಜೆಯಾದರೂ ಪ್ರಧಾನಿಯಾಗುವ ಹಕ್ಕು, ಅಧಿಕಾರ, ಅರ್ಹತೆ ಸಂವಿಧಾನವೇ ನೀಡಿದೆ ಎಂಬುದು ಗೊತ್ತಿಲ್ಲದೆ ಇರುವುದು ವಿಪರ್ಯಾಸ ಎಂದು ಹರಿಪ್ರಸಾದ್ ಹೇಳಿದ್ದಾರೆ.

ರಾಜ್ಯಸಭೆಯ ಸದಸ್ಯರಾದವರು ಪ್ರಧಾನಿಯಾಗಬಾರದೆಂದು ಯಾವ ಸಂವಿಧಾನ, ಕಾನೂನಿನಲ್ಲಿದೆ ಎಂದು ಬೆಳವಾಡಿ ಜನರಿಗೆ ತಿಳಿಸಲಿ. ಜಗತ್ತು ಕಂಡ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರು ಅಸ್ಸಾಂ ರಾಜ್ಯದಿಂದ ರಾಜ್ಯಸಭೆಗೆ ಸದಸ್ಯರಾಗಿ ಪ್ರಧಾನಿಯಾದದ್ದು ಯಾವ ಅಪರಾಧ? ಅಸ್ಸಾಂ ದೇಶದಲ್ಲಿರುವ ರಾಜ್ಯವಲ್ಲವೇ? ಕರ್ನಾಟಕದಿಂದ ಎಚ್.ಡಿ.ದೇವೇಗೌಡರು ಪ್ರಧಾನಿಯಾದದ್ದು ಕೂಡ ರಾಜ್ಯಸಭೆಯ ಸದಸ್ಯರಾಗಿಯೇ ಎನ್ನುವುದು ಬಹಿರಂಗ ಸತ್ಯವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಖ್ಯಾತ ಪತ್ರಕರ್ತರಾದ ಕುಲದೀಪ್ ನಯ್ಯರ್ ಅವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ದೇಶದ ಪ್ರಜೆಯಾದವರು ಯಾವ ರಾಜ್ಯದಿಂದಲೂ ರಾಜ್ಯಸಭೆ ಸದಸ್ಯರಾಗಲು ಅರ್ಹರು ಎಂದು ದಾವೆ ಹೂಡಿದ ನಂತರ ಸುಪ್ರೀಂಕೋರ್ಟ್ ಕೂಡ ಅದಕ್ಕೆ ಅವಕಾಶ ನೀಡಿದೆ. ಇದು ‘ಪ್ರಖಂಡ ಪಂಡಿತ’ ಬೆಳವಾಡಿಗೆ ತಿಳಿದಿದೆಯೇ? ಸಂವಿಧಾನ, ಕಾನೂನಿನ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ನಟ ಪ್ರಕಾಶ್ ಬೆಳವಾಡಿಯ ವಿಡಿಯೋದಲ್ಲಿ ಏನಿದೇ?:

‘ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮನಮೋಹನ್ ಸಿಂಗ್ ಅವರನ್ನು ಅಸ್ಸಾಂ ರಾಜ್ಯದ ನಾಗರಿಕ ಎಂದು ಹೇಳಿ ರಾಜ್ಯಸಭೆಗೆ ಆಯ್ಕೆ ಮಾಡಿ ಪ್ರಧಾನಮಂತ್ರಿ ಮಾಡಲಾಯಿತು. ಇದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧದವಾದದ್ದು’ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News