×
Ad

ಗ್ರಾಮ ಪಂಚಾಯಿತಿ ಅನುದಾನ ತಡೆ ಹಿಡಿದಿರುವ ಹಿನ್ನೆಲೆ: ಕೇಂದ್ರದ ಮೇಲೆ ಒತ್ತಡಕ್ಕೆ ತಮ್ಮ ಪುತ್ರ ಸೇರಿ ಎಲ್ಲ ಸಂಸದರಿಗೆ ಈಶ್ವರ್ ಖಂಡ್ರೆ ಪತ್ರ

Update: 2026-07-17 00:22 IST

ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ 2025-26ನೆ ಸಾಲಿನಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿದ್ದ 2186.20 ಕೋಟಿ ರೂ. ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡುವಂತೆ ಒತ್ತಡ ಹೇರಲು ತಮ್ಮ ಪುತ್ರ, ಬೀದರ್ ಸಂಸದ ಸಾಗರ್ ಸೇರಿದಂತೆ ಎಲ್ಲ ಸಂಸದರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಪತ್ರ ಬರೆದಿದ್ದಾರೆ.

ಗುರುವಾರ ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಂತ್ರಾಂಶದ ತೊಡಕನ್ನೇ ಕಾರಣವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡದಿರುವುದರಿಂದ ಮೊದಲೇ ಮಳೆ ಕೊರತೆ ಎದುರಿಸುತ್ತಿರುವ ರಾಜ್ಯದ ಗ್ರಾಮೀಣಾಭಿವೃದ್ಧಿಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರ ಮೇಲೆ ಎಲ್ಲ ಸಂಸದರೂ ಒತ್ತಡ ಹೇರಬೇಕು ಎಂದು ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರ ಎಲ್ಲ ನಿಗದಿತ ಷರತ್ತುಗಳನ್ನು ಪಾಲಿಸಿದ್ದರೂ ಕೇಂದ್ರ ಸರಕಾರ 15ನೆ ಹಣಕಾಸು ಆಯೋಗದ ಶಿಫಾರಸಿನಂತೆ 2025-2026ನೆ ಆರ್ಥಿಕ ವರ್ಷದಲ್ಲಿ ರಾಜ್ಯದ ಗ್ರಾಮ ಪಂಚಾಯತಿಗಳಿಗೆ 2186.20 ಕೋಟಿ ರೂ. ತಡೆಹಿಡಿದಿದೆ. ಈ ಸಂಬಂಧ ಇಲಾಖೆ ಪತ್ರ ಬರೆದರೂ, ತಾವೇ ಸಚಿವರಿಗೆ ಖುದ್ದು ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಅವರು ತಿಳಿಸಿದರು.

ರಾಜ್ಯವು 2024-25ರ ಆರ್ಥಿಕ ವರ್ಷಕ್ಕೆ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು ಒದಗಿಸಿರುವುದಲ್ಲದೆ, 2025ರ ಆಗಸ್ಟ್ ನೊಳಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಅಪ್‍ಲೋಡ್ ಮಾಡುವ ಕಾರ್ಯವನ್ನೂ ಪೂರ್ಣಗೊಳಿಸಿದೆ. ಕೇಂದ್ರ ಪಂಚಾಯತ್ ಸಚಿವಾಲಯ ಕೇಳಿದ್ದ ಎಲ್ಲ ಪ್ರಶ್ನೆಗಳಿಗೂ ಪೂರಕವಾಗಿ ಉತ್ತರಿಸಿದೆ. ಆದರೂ ಕೇಂದ್ರ ಪಂಚಾಯತ್ ರಾಜ್ ಇಲಾಖೆ ತಂತ್ರಾಂಶದಲ್ಲಿನ ತೊಡಕುಗಳನ್ನು ಮುಂದಿಟ್ಟುಕೊಂಡು 15 ಹಣಕಾಸು ಆಯೋಗದ 2025-26ರ ಸಾಲಿನ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿರುವ ತಾವು ಕೇಂದ್ರ ಪಂಚಾಯತ್ ರಾಜ್ ಸಚಿವರಿಗೆ ಮನವರಿಕೆ ಮಾಡಿಸಿ, ರಾಜ್ಯದ ಪಂಚಾಯತಿಗಳಿಗೆ ಬರಬೇಕಾದ 2186.20 ಕೋಟಿ ರೂ. ಹಣ ಬಿಡುಗಡೆ ಮಾಡಿಸುವಂತೆ ಅವರು ಮನವಿ ಮಾಡಿದರು.

ಎಚ್‍ಎಂಟಿ: ರಾಜ್ಯ ಸರಕಾರ ಎಚ್‍ಎಂಟಿಗೆ 1961ರಲ್ಲಿ ಬೆಂಗಳೂರು ಪೀಣ್ಯ, ಜಾಲಹಳ್ಳಿ, ಮ್ಯಾಕಲ ಚನ್ನೇನಹಳ್ಳಿಯಲ್ಲಿ ಭೂಸ್ವಾಧೀನ ಮಾಡಿಕೊಟ್ಟಿರುವ ಜಮೀನನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ, ಮರುವಶಪಡಿಸಿಕೊಳ್ಳಲಾಗುವುದು ಎಂಬ ಷರತ್ತು ಹಾಕಿದೆ. ಈ ಕುರಿತು ಮೈಸೂರು ಗೆಜೆಟ್ ನಲ್ಲಿ ಸ್ಪಷ್ಟ ಉಲ್ಲೇಖವಿದೆ ಎಂದು ಸಚಿವರು ರಾಜ್ಯಪತ್ರದ ಪ್ರತಿ ಪ್ರದರ್ಶಿಸಿದರು.

1913ರ ಭಾರತೀಯ ಕಂಪೆನಿಗಳ ಕಾಯ್ದೆ ಅಡಿ ನೋಂದಣಿಯಾದ ಎಚ್‍ಎಂಟಿಗೆ ಅಂದಿನ ಮೈಸೂರು ರಾಜ್ಯ ಸರಕಾರ ಜಾಲಹಳ್ಳಿ, ಪೀಣ್ಯ ಹಾಗೂ ಮ್ಯಾಕಲ ಚನ್ನೇನಹಳ್ಳಿಯಲ್ಲಿ ಭೂಸ್ವಾಧೀನ ಮಾಡಿ ಹಸ್ತಾಂತರಿಸುವಾಗ ಒಪ್ಪಂದವಾಗಿದ್ದು, ಎಚ್‍ಎಂಟಿ ಕೈಗಾರಿಕಾ ಉದ್ದೇಶಕ್ಕೆ ಮಾತ್ರವೇ ಈ ಭೂಮಿ ಬಳಸಬೇಕು, ಷರತ್ತು ಉಲ್ಲಂಘಿಸಿದರೆ ಮರಳಿ ಭೂಮಿಯನ್ನು ಸರಕಾರ ವಶಕ್ಕೆ ಪಡೆಯಬಹುದು ಎಂದಿದೆ. ಪಟ್ಟಾ ಭೂಮಿಗೆ ಈ ಷರತ್ತು ಇರುವಾಗ ಅರಣ್ಯ ಭೂಮಿಗೆ ಇರುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆಗಿದ್ದಾರೆ. ರಾಜ್ಯದ 7 ಕೋಟಿ ಜನರ ಆಸ್ತಿಯಾದ ಈ ಬೆಲೆಬಾಳುವ ಪ್ರದೇಶವನ್ನು ಬೆಂಗಳೂರು ಉತ್ತರದ ನಿವಾಸಿಗಳಿಗೆ ಉತ್ತಮ ಶ್ವಾಸತಾಣವಾಗಿ ಉಳಿಸಬೇಕು. ಭೂಮಿಯನ್ನು ಸರಕಾರಕ್ಕೆ ಹಿಂತಿರುಗಿಸಬೇಕು ಎಂದೂ ಸಚಿವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News