×
Ad

‘ಬಿಡದಿ ಟೌನ್‍ಶಿಪ್ ಯೋಜನೆ’ ಜಾರಿಯಾಗಲು ಬಿಡುವುದಿಲ್ಲ: ಆರ್. ಅಶೋಕ್

"ರೈತರನ್ನು ಮುಟ್ಟಿದರೆ ಪೊಲೀಸ್ ಠಾಣೆಗೆ ಮುತ್ತಿಗೆ"

Update: 2026-07-17 00:04 IST

ಬೆಂಗಳೂರು: ಬಿಡದಿ ಟೌನ್‍ಶಿಪ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ. ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲೂ ಚರ್ಚೆ ಮಾಡಲಿದ್ದೇನೆ. ಇಲ್ಲಿನ ರೈತರನ್ನು ಮುಟ್ಟಲು ಬಂದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಗುರುವಾರ ಯೋಜನೆ ವ್ಯಾಪ್ತಿಯ ಬಿಡದಿಯ, ಬೈರಮಂಗಲ, ಮಂಡಲಹಳ್ಳಿ ಮೊದಲಾದ ಕಡೆಗಳಲ್ಲಿ ರೈತರ ಮನೆಗಳಿಗೆ ಭೇಟಿ ನೀಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕನೇ ಬಾರಿಗೆ ಬಿಡದಿಗೆ ಭೇಟಿ ನೀಡಿದ್ದೇನೆ. ಕಾನೂನು ಪ್ರಕಾರ ಏಳು ದಿನಗಳ ಮುನ್ನ ನೋಟಿಸ್ ನೀಡಿ ಸ್ವಾಧೀನ ಮಾಡಬೇಕು. ಆದರೆ ಪೊಲೀಸರು ಹಾಗೂ ಅಧಿಕಾರಿಗಳು ಏಕಾಏಕಿ ಬಂದು ದೌರ್ಜನ್ಯ ಮಾಡಿದ್ದಾರೆ ಎಂದು ದೂರಿದರು.

ಬೈರಮಂಗಲದಲ್ಲಿ 40 ಎಕರೆ ಜಮೀನಿನಲ್ಲಿ ಸಹೋದರರು ಕೃಷಿ ಮಾಡುತ್ತಿದ್ದಾರೆ. ತೆಂಗು, ಮಾವು, ಏಲಕ್ಕಿ ಎಲ್ಲ ಬೆಳೆಗಳು ಇಲ್ಲಿವೆ. ಕೆಂಪು ವಲಯ ಮಾಡಿರುವುದರಿಂದ ಮಾರಾಟ ಮಾಡಲು ಆಗುತ್ತಿಲ್ಲ ಎಂದು ಆರೋಪ ಮಾಡಿದ್ದರು. ಆದರೆ ಇವರಿಗೆ ಕೃಷಿ ಮಾಡಲು ಆಸಕ್ತಿ ಇದೆ. ಈ ರೈತ ಕುಟುಂಬಗಳ ಜೊತೆ ಬಿಜೆಪಿ ಸದಾ ನಿಲ್ಲಲಿದೆ. ಪೊಲೀಸರು ರೈತರನ್ನು ಮುಟ್ಟಿದರೆ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

‘ಯೋಜನೆ ವ್ಯಾಪ್ತಿಯಲ್ಲಿನ ಜಮೀನು ಬಂಜರು ಎಂದು ಅಪಪ್ರಚಾರ ಮಾಡಲಾಗಿದೆ. ಆದುದರಿಂದ ಬಿಜೆಪಿ ಮುಖಂಡರೆಲ್ಲರೂ ಇಲ್ಲಿ ಗ್ರಾಮ ವಾಸ್ತವ್ಯ ಮಾಡಲು ತೀರ್ಮಾನಿಸಿದ್ದೇವೆ. ಜನರು ಇಲ್ಲಿ ಹೇಗೆ ಜೀವಿಸುತ್ತಿದ್ದಾರೆಂಬುದನ್ನು ಇಡೀ ರಾಜ್ಯಕ್ಕೆ ತೋರಿಸಿಕೊಡುತ್ತೇನೆ. ಅಧಿಕಾರಿಗಳು ಹಾಗೂ ಜನರಿಗೆ ಸಂದೇಶ ಹೋಗಬೇಕಿದೆ’

-ಆರ್.ಅಶೋಕ್ ಪ್ರತಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News