ಅನರ್ಹರನ್ನು ಬಿಪಿಎಲ್ ಪಟ್ಟಿಯಿಂದ ಹೊರ ಹಾಕಲಾಗುವುದು: ಸಚಿವ ಕೆ.ಎಚ್.ಮುನಿಯಪ್ಪ
"BPL ಚೀಟಿ ಪಡೆಯುವ ಆದಾಯ ಮಿತಿ ಹೆಚ್ಚಳಕ್ಕೆ ಸರಕಾರ ಕ್ರಮ ಕೈಗೊಳ್ಳಲಿದೆ"
ಸಚಿವ ಕೆ.ಎಚ್.ಮುನಿಯಪ್ಪ
ಬೆಂಗಳೂರು: ಆದ್ಯತಾ ಪಡಿತರ ಚೀಟಿ (ಬಿಪಿಎಲ್)ಗಳ ಪರಿಷ್ಕರಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದ್ದು, ಅನರ್ಹರನ್ನು ಬಿಪಿಎಲ್ ಪಟ್ಟಿಯಿಂದ ಹೊರ ಹಾಕಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ಮಂದಿ ಅನರ್ಹರು ಬಿಪಿಎಲ್ ಚೀಟಿ ಪಡೆದುಕೊಂಡಿದ್ದು, ಅವರನ್ನು ಆದಷ್ಟು ಬೇಗ ಹೊರಹಾಕಲಾಗುವುದು. ಇನ್ನೊಂದೆಡೆ, ಕೇಂದ್ರ ಸರಕಾರ 7.76ಲಕ್ಷ ಅನುಮಾನಾಸ್ಪದ ಅನರ್ಹ ಬಿಪಿಎಲ್ ಚೀಟಿಗಳನ್ನು ಗುರುತು ಮಾಡಿದೆ. ಅಲ್ಲಿಯೂ ಈ ಪೈಕಿ ಈಗಾಗಲೇ ಶೇ.50ರಷ್ಟು ಪರಿಷ್ಕರಣೆ ಮಾಡಲಾಗಿದೆ. ಸುಮಾರು 4,32,295 ಬಿಪಿಎಲ್‍ನಲ್ಲಿ ಇದ್ದವರನ್ನು ಎಪಿಎಲ್‍ಗೆ ಪರಿವರ್ತನೆ ಮಾಡಲಾಗಿದೆ. ಉಳಿದವರನ್ನು ಶೀಘ್ರದಲ್ಲಿಯೇ ಎಪಿಎಲ್‍ಗೆ ಪರಿವರ್ತನೆ ಮಾಡಲಾಗುವುದು ಎಂದರು.
ಬಿಪಿಎಲ್ ಚೀಟಿ ಆದಾಯ ಮಿತಿ ಹೆಚ್ಚಳ ಕುರಿತು ಚರ್ಚೆ ನಡೆಯುತ್ತಿದೆ. ಈ ಕುರಿತು ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ ಸಹ ಶಿಫಾರಸು ಮಾಡಿದೆ. ಹೀಗಾಗಿ, ರಾಜ್ಯ ಸರಕಾರವು ಆದಷ್ಟು ಬೇಗ ಬಿಪಿಎಲ್ ಚೀಟಿ ಪಡೆಯುವ ಆದಾಯ ಮಿತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿದೆ ಎಂದ ಅವರು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರದ 1,08,95,138 ಎಎವೈ, ಪಿಎಚ್‍ಎಚ್ ಪಡಿತರ ಚೀಟಿಗಳ ಮೂಲಕ 4,02,03,247 ಫಲಾನುಭವಿಗಳು ಹಾಗೂ ರಾಜ್ಯ ಸರಕಾರದ 16,13,266 ಪಿಎಚ್‍ಎಚ್ ಪಡಿತರ ಚೀಟಿಗಳ ಮೂಲಕ 43,48,046 ಫಲಾನುಭವಿಗಳು ಸೇರಿ ಒಟ್ಟಾರೆ 1,25,08,404 ಎಎವೈ, ಪಿಎಚ್‍ಎಚ್ ಪಡಿತರ ಚೀಟಿಗಳ ಮೂಲಕ 4,45,51,293 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿಸಲು ಸ್ಮಾರ್ಟ್ ಪಿಡಿಎಸ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಸಂಬಂಧ ಶೀಘ್ರದಲ್ಲಿಯೇ ಯೋಜನೆ ಜಾರಿಗೊಳಿಸಲಾಗುವುದು. ಇದರಡಿ ಇ-ಪಾಸ್ ಯಂತ್ರಗಳು ಹಾಗೂ ಎಲೆಕ್ಟ್ರಾನಿಕ್ ತೂಕ ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ಯೋಜನೆಯಿಂದ ಫಲಾನುಭವಿಗಳಿಗೆ ವೇಗದ, ನಿಖರ ಹಾಗೂ ವಿಶ್ವಾಸಾರ್ಹ ಸೇವೆ ದೊರೆಯಲಿದೆ ಎಂದು ಮುನಿಯಪ್ಪ ಮಾಹಿತಿ ನೀಡಿದರು.
‘ಆರೋಗ್ಯ ಸಂಬಂಧಿತ ಕಾರಣಕ್ಕೆ ಕೂಡಲೇ ಬಿಪಿಎಲ್ ಕಾರ್ಡ್ ನೀಡಲು ಸೂಚನೆ ನೀಡಲಾಗಿದೆ. 15 ದಿನಗಳಲ್ಲಿ ಕಾರ್ಡ್ ನೀಡಲು ಸೂಚಿಸಲಾಗಿದೆ’
-ಕೆ.ಎಚ್.ಮುನಿಯಪ್ಪ, ಆಹಾರ ಸಚಿವ