ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪ: ಒಂದೇ ಹೆಸರಿಗೆ ಹಲವು ವೋಟರ್ ಐಡಿ, ಬದುಕಿದ್ದವರನ್ನೇ ‘ಮೃತ’ ಎಂದು ನಮೂದು!
ನಕಲಿ EPIC ಸಂಖ್ಯೆಗಳ ಸೃಷ್ಟಿ, ಸಾವಿರಾರು ಹೆಸರುಗಳಲ್ಲಿ ತಾಂತ್ರಿಕ ದೋಷ; ಚುನಾವಣಾ ಆಯೋಗದ ಕಾರ್ಯವೈಖರಿ ವಿರುದ್ಧ ಆಕ್ರೋಶ, ಸಮಗ್ರ ತನಿಖೆಗೆ ಒತ್ತಾಯ
Screegrab: X.com/zoo_bear
ಬೆಂಗಳೂರು: ಕರ್ನಾಟಕದಲ್ಲಿ ಚುನಾವಣಾ ಆಯೋಗ ನಡೆಸಿದ SIR ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿವೆ. ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಿ, ನಕಲಿ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ಈ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿಯೇ ನಾಲ್ಕೈದು ಮತದಾರರ ಗುರುತಿನ ಚೀಟಿಗಳು (EPIC ಸಂಖ್ಯೆಗಳು) ಮುದ್ರಣಗೊಂಡಿರುವುದು, ಬದುಕಿರುವ ವ್ಯಕ್ತಿಗಳನ್ನು ಮೃತಪಟ್ಟಿದ್ದಾರೆಂದು ನಮೂದಿಸಿರುವುದು ಹಾಗೂ ಸಾವಿರಾರು ಮತದಾರರ ಹೆಸರುಗಳು ಅರ್ಥವಿಲ್ಲದ ಸಂಕೇತಗಳಾಗಿ ಬದಲಾಗಿರುವುದು ದಾಖಲೆಗಳ ಸಮೇತ ಬೆಳಕಿಗೆ ಬಂದಿದೆ.
ಆಲ್ಟ್ ನ್ಯೂಸ್ ನ ಸಹ-ಸಂಸ್ಥಾಪಕ ಮುಹಮ್ಮದ್ ಝುಬೇರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ ಮಾಹಿತಿ ಹಾಗೂ ‘ದಿ ಹಿಂದೂ’ ಪತ್ರಿಕೆಯ ತನಿಖಾ ವರದಿಯು ಈ ಆಡಳಿತಾತ್ಮಕ ಲೋಪಗಳನ್ನು ಮುನ್ನೆಲೆಗೆ ತಂದಿವೆ. ರಾಜಧಾನಿ ಬೆಂಗಳೂರಿನ ಮಹದೇವಪುರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ, ಯಲಹಂಕ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಪ್ರಮಾದಗಳು ಕಂಡುಬಂದಿವೆ. ಚುನಾವಣಾ ವ್ಯವಸ್ಥೆಯ ಸಾಫ್ಟ್ವೇರ್ ದೋಷಗಳು, ಕ್ಷೇತ್ರಮಟ್ಟದ ಅಧಿಕಾರಿಗಳ (BLO) ಪರಿಶೀಲನೆಯಲ್ಲಿನ ಕೊರತೆ ಹಾಗೂ ಹಿರಿಯ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯ ವೈಫಲ್ಯ ಈ ಅವ್ಯವಸ್ಥೆಗೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
► ಒಂದೇ ಹೆಸರಿಗೆ ನಾಲ್ಕು EPIC ಸಂಖ್ಯೆಗಳು
ಒಂದೇ ದಿನ ಸಲ್ಲಿಸಿದ ಅರ್ಜಿಗಳಿಗೆ ಪ್ರತ್ಯೇಕ ಮತದಾರರ ಗುರುತಿನ ಚೀಟಿಗಳನ್ನು ಸೃಷ್ಟಿಸಿರುವುದು ಈ ಪರಿಷ್ಕರಣೆಯ ಪ್ರಮುಖ ಲೋಪವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿಷೇಕ್ ಕೆ.ಎನ್. ಎಂಬ ಯುವಕನ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವರು 2026ರ ಸೆಪ್ಟೆಂಬರ್ 5ರಂದು ಒಂದೇ ದಿನ ನಾಲ್ಕು ಬಾರಿ ಫಾರಂ 6 ಅರ್ಜಿಗಳನ್ನು ಸಲ್ಲಿಸಿದ್ದರು. ಒಂದೇ ಹೆಸರು, ತಂದೆಯ ಹೆಸರು ಹಾಗೂ ವಿಳಾಸ ಹೊಂದಿದ್ದರೂ ಚುನಾವಣಾ ಆಯೋಗದ ದತ್ತಾಂಶ ವ್ಯವಸ್ಥೆಯು ಈ ಅರ್ಜಿಗಳನ್ನು ತಡೆಹಿಡಿಯಲಿಲ್ಲ. ಬದಲಾಗಿ, ಅಂತಿಮ ಪಟ್ಟಿಯಲ್ಲಿ ಅವರಿಗೆ ನಾಲ್ಕು ವಿಭಿನ್ನ EPIC ಸಂಖ್ಯೆಗಳ ಮತದಾರರ ಗುರುತಿನ ಚೀಟಿಗಳನ್ನು ಮಂಜೂರು ಮಾಡಲಾಗಿದೆ.
ಅದೇ ರೀತಿ ಮಹದೇವಪುರ ವಿಧಾನಸಭಾ ಕ್ಷೇತ್ರದ ನಿವಾಸಿ ಸಂತೋಷ್ ಕುಮಾರ್ ಭಾರತೀಯ ಅವರ ಹೆಸರು ಕರಡು ಪಟ್ಟಿಯಿಂದ ಕೈಬಿಡಲಾಗಿತ್ತು. ಅವರು ಹೆಸರು ಸೇರ್ಪಡೆಗಾಗಿ ಎರಡು ಬಾರಿ ಫಾರಂ 6 ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಒಂದೇ ಹೆಸರು, ತಂದೆಯ ಹೆಸರು ಹಾಗೂ ವಿಳಾಸಕ್ಕೆ ಐದು ವಿಭಿನ್ನ EPIC ಸಂಖ್ಯೆಗಳು ಸೃಷ್ಟಿಯಾಗಿವೆ.
ಬೆಂಗಳೂರು ದಕ್ಷಿಣ ಕ್ಷೇತ್ರದ 50 ವರ್ಷದ ಜ್ಯೋತಿ ಎನ್. ಅವರು ಮೂರು ಬಾರಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಐದು ಪ್ರತ್ಯೇಕ ಮತದಾರರ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಒಬ್ಬ ವ್ಯಕ್ತಿ ಹಲವು ಬಾರಿ ಅರ್ಜಿ ಸಲ್ಲಿಸಿದಾಗ, ಆಂತರಿಕ ದತ್ತಾಂಶ ವ್ಯವಸ್ಥೆಯು ನಕಲಿ ನಮೂದುಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವಲ್ಲಿ ವಿಫಲವಾಗಿದೆ.
►ಸ್ಥಳಾಂತರಗೊಂಡಿದ್ದಾರೆಂದು ನಮೂದು, ಆದರೂ ಎರಡು ಐಡಿ
ಸ್ಥಳಾಂತರ ಮತ್ತು ಪರಿಶೀಲನೆಗೆ ಸಂಬಂಧಿಸಿದ ಕ್ಷೇತ್ರಮಟ್ಟದ ವರದಿಗಳಲ್ಲಿಯೂ ತಪ್ಪುಗಳು ಕಂಡುಬಂದಿವೆ. ಮಹದೇವಪುರದ ನಿವಾಸಿ ರಾಕೇಶ್ ಕುಮಾರ್ ದಾಸ್ ಅವರನ್ನು ಪರಿಷ್ಕರಣೆ ವೇಳೆ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು BLO ಗುರುತಿಸಿ, ಕರಡು ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಿದ್ದರು. ಆದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಅದೇ ಹಳೆಯ ಮನೆ ಸಂಖ್ಯೆ D-2004ರ ವಿಳಾಸದಲ್ಲಿಯೇ ಅವರಿಗೆ ಎರಡು ಪ್ರತ್ಯೇಕ EPIC ಸಂಖ್ಯೆಗಳು ಮುದ್ರಣಗೊಂಡಿವೆ. ಅವರು ಹೆಸರು ಸೇರ್ಪಡೆಗಾಗಿ ಫಾರಂ 9 ಪಟ್ಟಿಯಲ್ಲಿ ಅರ್ಜಿ ಸಲ್ಲಿಸದಿದ್ದರೂ ಈ ಎರಡು ನಮೂದುಗಳು ಹೇಗೆ ಬಂದವು ಎಂಬ ಪ್ರಶ್ನೆ ಉದ್ಭವಿಸಿದೆ.
ಮತ್ತೊಂದೆಡೆ, ರಾಜರಾಜೇಶ್ವರಿನಗರ ಕ್ಷೇತ್ರದ 27 ವರ್ಷದ ಅರ್ಚನಾ ಎಂಬ ಯುವತಿಯನ್ನು BLO ಅಧಿಕಾರಿಗಳು ಮೃತಪಟ್ಟಿದ್ದಾರೆಂದು ಘೋಷಿಸಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದರು. ಬದುಕಿರುವುದನ್ನು ಸಾಬೀತುಪಡಿಸಲು ಅವರು ಮತ್ತೆ ಫಾರಂ 6 ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಿ, ಬೇರೆ EPIC ಸಂಖ್ಯೆಯನ್ನು ಪಡೆಯಬೇಕಾದ ಪರಿಸ್ಥಿತಿ ಎದುರಾಯಿತು.
ಒಬ್ಬ ನಾಗರಿಕರನ್ನು ಮೃತರೆಂದು ಘೋಷಿಸುವ ಮೊದಲು ಮರಣ ಪ್ರಮಾಣಪತ್ರ ಪರಿಶೀಲಿಸಲಾಗಿದೆಯೇ, ಜನನ-ಮರಣ ನೋಂದಣಾಧಿಕಾರಿಗಳಿಂದ ಮಾಹಿತಿ ದೃಢಪಡಿಸಲಾಗಿದೆಯೇ ಅಥವಾ BLO ಭೌತಿಕವಾಗಿ ಮನೆಗೆ ಭೇಟಿ ನೀಡಿದ್ದಾರೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ನೋಂದಣಾಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೆ ಕ್ಷೇತ್ರಮಟ್ಟದ ವರದಿಗಳಿಗೆ ಅನುಮೋದನೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
► ಸಾವಿರಾರು ಹೆಸರುಗಳು ಅರ್ಥಹೀನ ಅಕ್ಷರಗಳಾಗಿ ಪರಿವರ್ತನೆ
ಅಂತಿಮ ಪಟ್ಟಿಯಲ್ಲಿ ಕಂಡುಬಂದಿರುವ ಭಾಷಾಂತರ ಮತ್ತು ಫಾಂಟ್ ದೋಷಗಳು ತಾಂತ್ರಿಕ ಸಮಸ್ಯೆಗಳನ್ನೂ ಬಹಿರಂಗಪಡಿಸಿವೆ. ‘ದಿ ಹಿಂದೂ’ ವರದಿಯ ಪ್ರಕಾರ, ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚು ನಮೂದುಗಳು ಗುರುತಿಸಲಾಗದಷ್ಟು ದೋಷಪೂರಿತವಾಗಿವೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 324ರಲ್ಲಿ ಮತದಾರರು ಮತ್ತು ಅವರ ಸಂಬಂಧಿಕರ ಹೆಸರುಗಳು ಅರ್ಥಹೀನ ಅಕ್ಷರಗಳು ಹಾಗೂ ಗ್ರೀಕ್ ಚಿಹ್ನೆಗಳ ಸರಣಿಯಾಗಿ ಮುದ್ರಣಗೊಂಡಿವೆ.
ಹಲವು ಮತದಾರರ ಹೆಸರುಗಳು "aüîâdaüíóòèè", "óýðèôñâu", "NONE" ಮತ್ತು "NIL" ಎಂದು ನಮೂದಾಗಿವೆ. ಬೆಂಗಳೂರಿನಲ್ಲೇ ಇಂತಹ 1,500ಕ್ಕೂ ಹೆಚ್ಚು ನಮೂದುಗಳು ಇರುವುದು ಬೆಳಕಿಗೆ ಬಂದಿದೆ.
ಸಂಬಂಧಿಕರ ಹೆಸರಿನ ಕಾಲಂನಲ್ಲಿ ‘ಗಂಡ’, ‘ಹೆಂಡತಿ’ ಎಂಬ ಸಂಬಂಧಗಳನ್ನೇ ಹೆಸರುಗಳಾಗಿ ನಮೂದಿಸಲಾಗಿದೆ. ಯಲಹಂಕ ಕ್ಷೇತ್ರದಲ್ಲಿ ಸಂಬಂಧಿಕರ ಹೆಸರಿನ ಜಾಗದಲ್ಲಿ ಇಮೇಲ್ ವಿಳಾಸ ದಾಖಲಾಗಿದ್ದರೆ, ಬಿಬಿಎಂಪಿ ದಕ್ಷಿಣ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಜನ್ಮದಿನಾಂಕಗಳು ಹೆಸರುಗಳ ಜೊತೆಗೆ ಸೇರಿಕೊಂಡಿವೆ.
ಕನ್ನಡ ಅಕ್ಷರಗಳನ್ನು ಇಂಗ್ಲಿಷ್ಗೆ ಲಿಪ್ಯಂತರ ಮಾಡುವಾಗ ಮತ್ತು ಕಡತಗಳನ್ನು ಪರಿವರ್ತಿಸುವಾಗ ಸಾಫ್ಟ್ವೇರ್ ಫಾಂಟ್ಗಳನ್ನು ಗುರುತಿಸದ ಕಾರಣ ಇಂತಹ ಅಸಂಬದ್ಧ ನಮೂದುಗಳು ಸೃಷ್ಟಿಯಾಗಿವೆ ಎಂದು ಚುನಾವಣಾಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ ಕರಡು ಪಟ್ಟಿಯಿಂದ ಅಂತಿಮ ಪಟ್ಟಿ ಪ್ರಕಟಿಸುವವರೆಗೂ ಇಂತಹ ಗಂಭೀರ ತಾಂತ್ರಿಕ ದೋಷಗಳನ್ನು ಸರಿಪಡಿಸದೆ ಪಟ್ಟಿಯನ್ನು ಅಂತಿಮಗೊಳಿಸಿರುವುದು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ.
► ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ
ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಈ ಲೋಪಗಳು ಗಂಭೀರ ಆತಂಕಕ್ಕೆ ಕಾರಣವಾಗಿವೆ. ನಕಲಿ ಮತದಾರರನ್ನು ತೆಗೆದುಹಾಕಬೇಕಾದ ಪ್ರಕ್ರಿಯೆಯಲ್ಲಿಯೇ ಹೊಸ ನಕಲಿ ನಮೂದುಗಳು ಸೃಷ್ಟಿಯಾಗಿರುವುದು ಚುನಾವಣಾ ಪಾವಿತ್ರ್ಯಕ್ಕೆ ಧಕ್ಕೆ ತರುವ ಸಾಧ್ಯತೆಯಿದೆ. ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು EPIC ಸಂಖ್ಯೆಗಳು ಅಸ್ತಿತ್ವದಲ್ಲಿದ್ದರೆ ಮತದಾನದ ದುರುಪಯೋಗಕ್ಕೆ ಅವಕಾಶ ಸಿಗಬಹುದು. ಜೀವಂತ ನಾಗರಿಕರನ್ನು ಮೃತಪಟ್ಟಿದ್ದಾರೆಂದು ದಾಖಲಿಸಿ ಮತದಾನದ ಹಕ್ಕಿನಿಂದ ವಂಚಿಸುವುದು ಸಂವಿಧಾನದತ್ತ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ.
ದೋಷಪೂರಿತ ಸಾಫ್ಟ್ವೇರ್ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅಪನಂಬಿಕೆ ಮೂಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಭಾರತೀಯ ಚುನಾವಣಾ ಆಯೋಗ ತಕ್ಷಣ ಸಮಗ್ರ ಲೆಕ್ಕಪರಿಶೋಧನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.
ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ, ಅರ್ಹ ಮತದಾರರ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಆಯೋಗ ತ್ವರಿತವಾಗಿ ನಿರ್ವಹಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಆಗ್ರಹಿಸಿದ್ದಾರೆ.