ಭೂಸ್ವಾಧೀನ ಪ್ರಕ್ರಿಯೆ ನಡೆಸದೆ, ಪರಿಹಾರ ಪಾವತಿಸದೆ ಆಸ್ತಿ ತೆರವು : ಪಿಡಿಒಗೆ 50 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು : ರಸ್ತೆ ವಿಸ್ತರಣೆಯಂತಹ ಸಾರ್ವಜನಿಕ ಕಾಮಗಾರಿಗಳಿಗಾಗಿ ಕಾನೂನುಬದ್ಧ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ, ಪರಿಹಾರವನ್ನೂ ನೀಡದೆ ನಾಗರಿಕರ ಆಸ್ತಿ ತೆರವುಗೊಳಿಸುವುದು ಸಂವಿಧಾನದ ಪರಿಚ್ಛೇದ 300ಎ ಅಡಿಯ ಆಸ್ತಿ ಹಕ್ಕಿನ ಉಲ್ಲಂಘನೆ ಎಂದಿರುವ ಹೈಕೋರ್ಟ್, ಅಂಗಡಿಯೊಂದರ ತೆರವು ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮಂಗಳೂರು ಗ್ರಾಮ ಪಂಚಾಯತ್‌ನು ಪಿಡಿಒ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ಆದೇಶ ಮಾಡಿದೆ.
ಕೆಡವಲಾದ ಆಸ್ತಿಯ ಭಾಗಕ್ಕೆ ಸಂಬಂಧಿಸಿದಂತೆ ಸ್ವಾಧೀನ ಪ್ರಕ್ರಿಯೆ ಆರಂಭಿಸಿ, ಪರಿಹಾರ ನಿರ್ಧರಿಸಿ ಪಾವತಿಸಬೇಕೆಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದಿರುವ ವಿಭಾಗೀಯ ನ್ಯಾಯಪೀಠ, ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ಆಸ್ತಿ ಕೆಡವಿರುವ ಪ್ರಕರಣದಲ್ಲಿ ಪರಿಹಾರ ಪಾವತಿಗೆ ನಿರ್ದೇಶಿಸುವುದರಿಂದ ಮಾತ್ರ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಸಂದಂತೆ ಆಗುವುದಿಲ್ಲ. ಸ್ವಾಧೀನ ಪ್ರಕ್ರಿಯೆ ಆರಂಭಿಸದೆ ಅಥವಾ ಪರಿಹಾರ ನೀಡದೆ ವಸತಿ ಹಾಗೂ ವಾಣಿಜ್ಯ ಬಳಕೆಯ ಆಸ್ತಿಯನ್ನು ಕೆಡವಿರುವುದು ಸಂವಿಧಾನದ ಪರಿಚ್ಛೇದ 300ಎ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪಿಡಿಒ ಅವರ ನಡವಳಿಕೆ, ನಾಗರಿಕರ ಆಸ್ತಿಗೆ ಉಂಟಾದ ಹಾನಿ ಹಾಗೂ ನ್ಯಾಯಾಲಯ ನಿರ್ದೇಶಿಸಿದ್ದ ಜಂಟಿ ಸರ್ವೆಗೂ ಕಾಯದೆ ತೆರವುಗೊಳಿರುವುದನ್ನು ಪರಿಗಣಿಸಿ 50 ಸಾವಿರ ರೂ. ದಂಡ ವಿಧಿಸಿ ಮೇಲ್ಮನವಿ ವಜಾಗೊಳಿಸಿರುವ ಹೈಕೋರ್ಟ್, ದಂಡದ ಮೊತ್ತವನ್ನು ಪಂಚಾಯತ್ ನಿಧಿಯಿಂದಲ್ಲ, ಪಿಡಿಒ ತಮ್ಮ ಸ್ವಂತ ಜೇಬಿನಿಂದ ನಾಲ್ಕು ವಾರಗಳಲ್ಲಿ ಸಂತ್ರಸ್ತರಿಗೆ ಪರಿಹಾರವಾಗಿ ಪಾವತಿಸಬೇಕು ಎಂದು ನಿರ್ದೇಶಿಸಿದೆ.