ಬೆಂಗಳೂರು : ಸಾರ್ವಜನಿಕ ಅಧಿಕಾರವನ್ನು ಜನರ ಸೇವೆ ಸಲ್ಲಿಸಲು ನೀಡಲಾಗಿರುತ್ತದೆಯೇ ಹೊರತು, ರಾಜಕೀಯವಾಗಿ ನೆಲೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಸಾಧನವನ್ನಾಗಿಸಬಾರದು ಎಂದಿರುವ ಹೈಕೋರ್ಟ್, ಸಾರ್ವಜನಿಕ ಹುದ್ದೆ ಎಂಬುದು ಸೋತ ರಾಜಕಾರಣಿಗೆ ನೀಡುವ ’ಸಮಾಧಾನಕರ ಬಹುಮಾನ’ ಅಲ್ಲ ಎಂದು ತೀಕ್ಷ್ಣವಾಗಿ ನುಡಿದಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಗುವಳಿ ಭೂಮಿ ಮಂಜೂರಾತಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಸಮಿತಿ ರಚಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿರುವ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.

2023ರಲ್ಲಿ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಭೂಮಿ ಮಂಜೂರಾತಿ ಸಮಿತಿಯನ್ನು ಸರಕಾರ ರಚಿಸಿತ್ತು. ನಂತರ ಅವರ ಎದುರು ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ್ ಪೂಜಾರಿ ಕೋರಿಕೆ ಮೇರೆಗೆ ಅವರ ನೇತೃತ್ವದಲ್ಲಿ ಹೆಚ್ಚುವರಿ ಸಮಿತಿ ರಚಿಸಿ 2023ರ ಡಿಸೆಂಬರ್ 4ರಂದು ಸರಕಾರ ಮತ್ತೊಂದು ಅಧಿಸೂಚನೆ ಹೊರಡಿಸಿತ್ತು.

ಈ ಆದೇಶ ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದರಿಂದ ಗುರುರಾಜ ಗಂಟಿಹೊಳೆ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ಮೇಲ್ಮನವಿಯನ್ನು ಪುರಸ್ಕರಿಸಿರುವ ವಿಭಾಗೀಯ ನ್ಯಾಯಪೀಠ, ಹೆಚ್ಚುವರಿ ಸಮಿತಿ ರಚನೆಗೆ ಸಂಬಂಧಿಸಿದ ಸರಕಾರದ ಅಧಿಸೂಚನೆಯನ್ನು ಅಸಿಂಧುಗೊಳಿಸಿದೆ.

ರಾಜಕೀಯ ಪುನರ್ವಸತಿಗೆ ಸಾರ್ವಜನಿಕ ಹುದ್ದೆ ಬಳಕೆ ಸಲ್ಲದು: ಯಾವುದೇ ಮಾರ್ಗಸೂಚಿ ಅನುಸರಿಸದೆ ಕೇವಲ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಹೆಚ್ಚುವರಿ ಸಮಿತಿ ರಚಿಸುವ ಸರಕಾರದ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಸಾರ್ವಜನಿಕರ ನಿಜವಾದ ಅಗತ್ಯ ಪೂರೈಸುವ ಬದಲು, ರಾಜಕೀಯ ಪ್ರಭಾವ ಅಥವಾ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ನಾಯಕರೊಬ್ಬರು ಪರೋಕ್ಷ ಮಾರ್ಗದ ಮೂಲಕ ಅಧಿಕಾರ ಪಡೆಯಲು ಮತ್ತು ಹಿಂಬಾಗಿಲಿನ ದಾರಿಯಿಂದ ಕಳೆದುಕೊಂಡ ಪ್ರಭಾವ ಮರಳಿ ಗಳಿಸಲು ನಡೆಸಿದ ಪ್ರಯತ್ನವನ್ನು ಸೂಚಿಸುತ್ತವೆ. ರಾಜಕೀ ಯವಾಗಿ ಹಿನ್ನಡೆ ಅನುಭವಿಸಿದ ವ್ಯಕ್ತಿಯೊಬ್ಬರಿಗೆ ಪುನರ್ವಸತಿ ಕಲ್ಪಿಸಲು ಅಥವಾ ಕಳೆದುಕೊಂಡ ಪ್ರಭಾವವನ್ನು ಮರಳಿ ಪಡೆಯಲು ಪರೋಕ್ಷ ಅವಕಾಶವನ್ನು ಒದಗಿಸಿಕೊಡುವ ಉದ್ದೇಶದಿಂದ ಮಾತ್ರ ಹೆಚ್ಚುವರಿ ಹುದ್ದೆ ಅಥವಾ ವ್ಯವಸ್ಥೆಯನ್ನು ಸೃಷ್ಟಿಸುವುದನ್ನು ಸಮರ್ಥಿಸಿಕೊಳ್ಳಲಾಗದು ಎಂದು ಚಾಟಿ ಬೀಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor