ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳ ಉತ್ತೇಜನೆ: ಸಚಿವ ಎಂ.ಬಿ.ಪಾಟೀಲ್
ಸಚಿವ ಎಂ.ಬಿ.ಪಾಟೀಲ್ (File Photo)
ಬೆಳಗಾವಿ(ಸುವರ್ಣ ವಿಧಾನಸೌಧ): 2025-30ರ ಕೈಗಾರಿಕಾ ನೀತಿಯು ರಾಜ್ಯದ ಸಮಗ್ರ ಅಭಿವೃದ್ಧಿ ಗುರಿಯೊಂದಿಗೆ ಬೆಂಗಳೂರಿನಿಂದ ಹೊರಗಡೆ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಚ್.ಎಸ್.ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೈಗಾರಿಕಾ ನೀತಿಯಲ್ಲಿ ರಾಜ್ಯದ ಜಿಲ್ಲೆಗಳನ್ನು ಮೂರು ವಲಯಗಳಾಗಿ ವರ್ಗೀಕರಿಸಿದೆ. ಕೈಗಾರಿಕೆಯಲ್ಲಿ ಹಿಂದುಳಿದ ತಾಲೂಕುಗಳು/ಜಿಲ್ಲೆಗಳನ್ನು ವಲಯ-1 ಮತ್ತು ವಲಯ-2ರಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ವಲಯ-3ರಲ್ಲಿ ವರ್ಗೀಕರಿಸಲಾಗಿದೆ ಎಂದರು.
ರಾಜ್ಯದ ಸಮತೋಲನ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು/ತಾಲೂಕುಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ಕಂಪೆನಿಗಳೊಂದಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಲು ಸಭೆಗಳನ್ನು ನಡೆಸಲಾಗುತ್ತಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಬೇಕಾಗಿರುವ ಭೂಮಿ ಖರೀದಿ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಕೈಗಾರಿಕೆಗಳನ್ನು ಪ್ರಾರಂಭಿಸಲು ಬೇಕಾಗಿರುವ ರಾಜ್ಯದ ಎನ್.ಒ.ಸಿ/ಒಪ್ಪಿಗೆಗಳನ್ನು ಸ್ವಯಂಘೋಷಣ ಪತ್ರದ ಆಧಾರದ ಮೇಲೆ ಪಡೆಯಲು 3 ವರ್ಷಗಳವರೆಗೆ ವಿಸ್ತರಿಸಿ ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಅಧಿನಿಯಮ 2002ಕ್ಕೆ ತಿದ್ದುಪಡಿ ತರಲಾಗಿದೆ. ಅಲ್ಲದೆ, ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ 2025-30 ಹಾಗೂ ಕರ್ನಾಟಕ ಏರೋಸ್ಪೇಸ್ ಅಂಡ್ ಡಿಫೆನ್ಸ್ ಪಾಲಿಸಿ 2022-27 ಅನ್ನು ಸಹ ಹೊರತಂದಿದ್ದು, ಈ ನೀತಿಗಳಡಿ ವಲಯವಾರು ಕೈಗಾರಿಕೆಗಳಿಗೆ ಆಕರ್ಷಕ ರಿಯಾಯಿತಿ ಹಾಗೂ ಉತ್ತೇಜನಗಳನ್ನು ಒದಗಿಸಲಾಗುತ್ತಿದೆ. ಅನುಮೋದಿತ ಕೈಗಾರಿಕೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಠಾನಗೊಳ್ಳುತ್ತಿವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ ಹಿಂದಿನ 3 ವರ್ಷಗಳಲ್ಲಿ (2022-23ರಿಂದ ಅಕ್ಟೋಬರ್-2025ರ ಅಂತ್ಯದವರೆಗೆ) ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಟ್ಟು 1888 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 5,03,539 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯಾಗಲಿದ್ದು ಮತ್ತು 6,92,591 ಜನರಿಗೆ ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಅನುಮೋದಿತ ಯೋಜನೆಗಳ ಪೈಕಿ 67 ಯೋಜನೆಗಳು ಅನುಷ್ಠಾನಗೊಂಡಿದ್ದು ಇವುಗಳಿಂದ 66435.09 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯಾಗಿದೆ ಹಾಗೂ 93,925 ಸಂಖ್ಯೆಯ ಉದ್ಯೋಗ ಸೃಜನೆಯಾಗಿದೆ. ಉಳಿದ ಯೋಜನೆಗಳು ವಿವಿಧ ಅನುಷ್ಠಾನ ಹಂತಗಳಲ್ಲಿದ್ದು, ಇವೆಲ್ಲವೂ ಬೃಹತ್ ಕೈಗಾರಿಕೆಗಳಾಗಿರುವುದರಿಂದ, ಅನುಷ್ಠಾನಕ್ಕೆ ಕನಿಷ್ಠ 3-5 ವರ್ಷಗಳು ಬೇಕಾಗುತ್ತವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.