ಮುಡಾ ಪ್ರಕರಣ | ಕ್ಷುಲ್ಲಕ ಆರೋಪ ಮಾಡಿದ ವಿಪಕ್ಷಗಳಿಗೆ ಸುಪ್ರೀಂ ತಕ್ಕ ಶಾಸ್ತಿ : ಬಿ.ಎಸ್.ಸುರೇಶ್
ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಈ ಪ್ರಕರಣದಲ್ಲಿ ನನ್ನದಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಪಾತ್ರವಾಗಲಿ ಇಲ್ಲ ಎಂದು ಆರಂಭದಿಂದಲೂ ಹೇಳುತ್ತಾ ಬಂದಿದ್ದೆ. ಆದರೆ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕ್ಷುಲ್ಲಕ ಆರೋಪಗಳನ್ನು ಮಾಡಿ ನಮ್ಮ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನ ಮಾಡಿದ್ದರು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಮಾಹಿತಿ ಹಂಚಿಕೊಂಡ ಅವರು, ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿನೋದಚಂದ್ರ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ನ್ಯಾಯಪರವಾದ ತೀರ್ಪನ್ನು ನೀಡಿದೆ ಎಂದು ಹೇಳಿದರು.
ಪ್ರತಿಪಕ್ಷಗಳು ಎಷ್ಟೇ ಟೀಕೆಗಳು, ಆರೋಪಗಳನ್ನು ಮಾಡಿದರೂ, ದೇಶದ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು ನಾವು. ಆ ನಂಬಿಕೆಯೇ ಈಗ ನ್ಯಾಯಪರವಾದ ತೀರ್ಪು ಬರುವಂತೆ ಮಾಡಿದೆ. ದುರುದ್ದೇಶಪೂರಿತವಾಗಿ ಜಾರಿ ನಿರ್ದೇಶನಾಲಯವನ್ನು ಈ ಪ್ರಕರಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇದೇ ಕಾರಣದಿಂದ ನಮ್ಮದೇನೂ ತಪ್ಪಿಲ್ಲ ಎಂಬುದನ್ನು ಅರಿತಿದ್ದ ರಾಜ್ಯ ಹೈಕೋರ್ಟ್ ಈ ಹಿಂದೆ ಈ.ಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಈ.ಡಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡುವ ಮೂಲಕ ಸುಪ್ರೀಂಕೋರ್ಟ್ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಪರಾಕಿ ಹಾಕಿದೆ ಎಂದು ಸುರೇಶ್ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಸುಳ್ಳು ಆರೋಪಗಳನ್ನು ಮಾಡಿ ಕಪಟ ನಾಟಕದ ಪಾದಯಾತ್ರೆ ಮಾಡಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸುಪ್ರೀಂಕೋರ್ಟಿನ ತೀರ್ಪಿನಿಂದ ತೀವ್ರ ಮುಖಭಂಗವಾಗಿದೆ. ಅವರ ಕ್ಷುಲ್ಲಕ ಆರೋಪಗಳಿಗೆ ತಕ್ಕ ಶಾಸ್ತಿಯಾಗಿದೆ. ಈಗಲಾದರೂ ಪ್ರತಿಪಕ್ಷಗಳು ಕ್ಷುಲ್ಲಕ ಆರೋಪಗಳನ್ನು ಮಾಡುವುದನ್ನು ಬಿಟ್ಟು ಜನರ ಬಳಿಗೆ ಹೋಗಿ ಅವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಲಿ ಎಂದು ಅವರು ಹೇಳಿದರು.
ಸುಪ್ರೀಂ ಎಚ್ಚರಿಕೆ ಬಗ್ಗೆ ಎಚ್ಚರವಿರಲಿ: ಇನ್ನು ಸುಪ್ರೀಂಕೋರ್ಟ್ ಈ.ಡಿಯಂತಹ ಸಂಸ್ಥೆಗಳನ್ನು ರಾಜಕೀಯ ದಾಳವನ್ನಾಗಿ ಬಳಸಬಾರದು. ಹೀಗೆ ರಾಜಕೀಯ ಮಾಡುವುದನ್ನು ಮುಂದುವರಿಸಿದರೆ ಕಠಿಣ ಶಬ್ಧಗಳಲ್ಲಿ ಆದೇಶ ನೀಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ನೇರ ಎಚ್ಚರಿಕೆ ನೀಡಿರುವುದರ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಎಚ್ಚರಿಕೆ ವಹಿಸಲಿ ಎಂದು ಸುರೇಶ್ ತಿಳಿಸಿದರು.
ದೇಶ ಕಂಡ ನಿಷ್ಠಾವಂತ ರಾಜಕಾರಣಿ ಸಿದ್ದರಾಮಯ್ಯ. ಅವರ ವೈಯಕ್ತಿಕ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿದ್ದರು. ಈ ಮೂಲಕ ಮುಖ್ಯಮಂತ್ರಿಯ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದರು. ಆದರೆ, ಇಂದು ಸುಪ್ರೀಂಕೋರ್ಟ್ ನೀಡಿದ ನ್ಯಾಯಪರವಾದ ತೀರ್ಪಿನಿಂದ, ಪ್ರತಿಪಕ್ಷಗಳ ಮೈ ಎಲ್ಲ ಮಸಿಯಾಗುವಂತೆ ಆಗಿದೆ ಎಂದು ಅವರು ಹೇಳಿದರು.
ರಾಜೀನಾಮೆ ನೀಡಲಿ: ಸುಳ್ಳು ಆರೋಪಗಳನ್ನು ಮಾಡಿ ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಂಡು, ಪೊಳ್ಳು ಪಾದಯಾತ್ರೆ ನಡೆಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿರುವ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಸುರೇಶ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಉಪಸ್ಥಿತರಿದ್ದರು.