ರಾಜ್ಯದ ಕಾಂಗ್ರೆಸ್ ಸರಕಾರ ದಿವಾಳಿಯಾಗಿದೆ: ಬಿ.ಎಸ್. ಯಡಿಯೂರಪ್ಪ
Update: 2025-07-08 21:05 IST
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ದಿವಾಳಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುವ ಸ್ಥಿತಿ ಈ ಸರಕಾರಕ್ಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರಿದ್ದಾರೆ.
ಮಂಗಳವಾರ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಸ್ತುತ ಗೃಹಲಕ್ಷ್ಮೀ ಯೋಜನೆಗೆ 3 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರಕಾರದ ಯಾವುದೇ ಒಂದು ಕಾರ್ಯಕ್ರಮವು ಕೇವಲ ಪ್ರಚಾರಕ್ಕಾಗಿ ನಡೆಯುವ ಕಾರ್ಯಕ್ರಮಗಳೇ ಹೊರತು ಅದನ್ನು ಕಾರ್ಯರೂಪಕ್ಕೆ ತರುವಂಹ ಯಾವುದೇ ಪ್ರಯತ್ನ ಮಾಡಿರುವುದಿಲ್ಲ. ಹೀಗಾಗಿ ಸರಕಾರ ದಿವಾಳಿಯಾಗಿದೆ ಎಂದು ಅವರು ಟೀಕಿಸಿದರು.
ಸರಕಾರದ ವಾಸ್ತವಿಕ ಸ್ಥಿತಿಯನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳು ಒಪ್ಪಿಕೊಳ್ಳಲಿ. ಅಲ್ಲದೆ, ರಾಜ್ಯದಲ್ಲಿನ ವಾಸ್ತವಿಕ ಹಣಕಾಸಿನ ಸ್ಥಿತಿಯನ್ನು ಬಿಡುಗಡೆ ಮಾಡಬೇಕು ಎಂದು ಯಡಿಯೂರಪ್ಪ ಇದೇ ವೇಳೆ ಒತ್ತಾಯಿಸಿದರು.