ಸಿಎಂ ಡಿ.ಕೆ.ಶಿವಕುಮಾರ್‌ಗೆ ಮನವಿ ಸಲ್ಲಿಸಿದ ಬಿ.ವೈ.ರಾಘವೇಂದ್ರ ನೇತೃತ್ವದ ನಿಯೋಗ; ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರ ಪೀಠ ಸ್ಥಾಪನೆಗೆ ಆಗ್ರಹ
ಬೆಂಗಳೂರು : ಶಿವಮೊಗ್ಗದಲ್ಲಿ ಹೈಕೋರ್ಟಿನ ಸರ್ಕ್ಯೂಟ್(ಸಂಚಾರ) ಪೀಠವನ್ನು ಸ್ಥಾಪಿಸಬೇಕು. ಜತೆಗೆ, ಅಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದ ವಕೀಲರ ನಿಯೋಗ ಮನವಿ ಸಲ್ಲಿಸಿತು.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ನಿಯೋಗವು ಮನವಿ ಸಲ್ಲಿಸಿತು. ಈ ವೇಳೆ ಪ್ರಸ್ತಾಪಿಸಿದ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ ಮತ್ತು ಭದ್ರಾವತಿ ವಕೀಲರ ಸಂಘಗಳು ಹಾಗೂ ಜಿಲ್ಲೆಯ ವಿವಿಧ ಸಾಮಾಜಿಕ, ನಾಗರಿಕ ಮತ್ತು ವೃತ್ತಿಪರ ಸಂಘಟನೆಗಳು ಒಗ್ಗೂಡಿ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ಶಾಂತಿಯುತ ಹೋರಾಟವನ್ನು ನಡೆಸುತ್ತಿವೆ ಎಂದರು.
ಶಿವಮೊಗ್ಗ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರಿನ ಪೀಠದ ವ್ಯಾಪ್ತಿಗೆ ಸೇರಿಸುವ ಆಲೋಚನೆ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದು ನಮ್ಮ ಶಿವಮೊಗ್ಗ ಭಾಗದ ವಕೀಲರ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಐತಿಹಾಸಿಕವಾಗಿ ಮತ್ತು ಪ್ರಾಯೋಗಿಕವಾಗಿ ಶಿವಮೊಗ್ಗ ಜಿಲ್ಲೆಯು ಬೆಂಗಳೂರಿನೊಂದಿಗೆ ಉತ್ತಮ ಹಾಗೂ ಸುಲಭ ಸಾರಿಗೆಯ ಜೊತೆಗೆ ಸುಗಮ ಸಂಪರ್ಕವನ್ನು ಹೊಂದಿದೆ. ಬೆಂಗಳೂರಿಗೆ ಪ್ರಯಾಣಿಸುವುದು ಜನರಿಗೆ, ಕಕ್ಷಿದಾರರಿಗೆ ಮತ್ತು ವಕೀಲರಿಗೆ ಅತ್ಯಂತ ಸುಲಭ ಹಾಗೂ ಅನುಕೂಲಕರವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಶಿವಮೊಗ್ಗದಿಂದ ಕರಾವಳಿ ಭಾಗಕ್ಕೆ ಪ್ರಯಾಣಿಸಬೇಕಾದರೆ ಪಶ್ಚಿಮ ಘಟ್ಟಗಳ ಕಠಿಣ ಘಾಟಿ ರಸ್ತೆಗಳನ್ನು ದಾಟಬೇಕಾಗುತ್ತದೆ.
ಅದರಲ್ಲೂ ಮಳೆಗಾಲದಲ್ಲಿ ಪ್ರಕೃತಿ ವಿಕೋಪಗಳಿಂದಾಗಿ ಈ ಮಾರ್ಗಗಳು ಪದೇ ಪದೇ ಸ್ಥಗಿತಗೊಳ್ಳುವುದರಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ, ಶಿವಮೊಗ್ಗದಲ್ಲೇ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಯಾಗಬೇಕು. ಅಲ್ಲಿಯವರೆಗೂ ಪ್ರಸ್ತುತ ಇರುವಂತೆ ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಲ್ಲೇ ಶಿವಮೊಗ್ಗ ಜಿಲ್ಲೆಯನ್ನು ಮುಂದುವರಿಯಬೇಕೆಂಬುದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ತಿನ ಸದಸ್ಯ ಧನರಾಜ್ ಸರ್ಜಿ, ಅರುಣ್ ಶಂಕರ್ ಮೂರ್ತಿ, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಬಸಪ್ಪ ಗೌಡ ಸೇರಿದಂತೆ ಪ್ರಮುಖರಿದ್ದರು.