×
Ad

ಜು.1ರಿಂದ ಮನರೇಗಾ ಹೊಸರೂಪ ‘ವಿಬಿ ಜಿ ರಾಮ್ ಜಿ’ ಜಾರಿ : ಸಚಿವ ಈಶ್ವರ್ ಖಂಡ್ರೆ

Update: 2026-06-24 20:27 IST

ಬೆಂಗಳೂರು : ಗ್ರಾಮೀಣ ಭಾಗದ ಕುಟುಂಬಗಳಿಗೆ ಉದ್ಯೋಗದ ಖಾತ್ರಿ ನೀಡಿದ್ದ ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಹೊಸ ಸ್ವರೂಪ ‘ವಿಬಿ ಜಿ ರಾಮ್ ಜಿ’ಯನ್ನು ಜು.1ರಿಂದಲೆ ಜಾರಿಗೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದಲ್ಲಿರುವ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಯಡಿ ಕೇಂದ್ರ ಸರಕಾರ ಶೇ.90 ಹಾಗೂ ರಾಜ್ಯ ಸರಕಾರ ಶೇ.10ರ ಅನುಪಾತದಲ್ಲಿ ವೇತನ ಭರಿಸುತ್ತಿತ್ತು. ಆದರೆ, ಈಗ ಕೇಂದ್ರ ಸರಕಾರ ಶೇ.60 ಹಾಗೂ ರಾಜ್ಯ ಸರಕಾರ ಶೇ.40ರ ಅನುಪಾತದಲ್ಲಿ ವೆಚ್ಚ ಭರಿಸಬೇಕಾಗಿದ್ದು ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಆಗುತ್ತಿದೆ ಎಂದು ತಿಳಿಸಿದರು.

2006ರಿಂದ 2026ರವರೆಗೆ ಕೇಂದ್ರ ಸರಕಾರ ನರೇಗಾ ಅಡಿಯಲ್ಲಿ 56,492 ಕೋಟಿ ರೂ. ಭರಿಸಿದ್ದರೆ, ರಾಜ್ಯ ಸರಕಾರ 4,821 ಕೋಟಿ ರೂ. ಮಾತ್ರ ಭರಿಸಿ ಸುಮಾರು 182 ಕೋಟಿ ಮಾನವ ದಿನಗಳ ಉದ್ಯೋಗ ಒದಗಿಸಿತ್ತು. ಆದರೆ ಈಗ ಒಂದೆ ವರ್ಷಕ್ಕೆ 3,806 ಕೋಟಿ ರೂ.ವೆಚ್ಚ ಭರಿಸುವ ಸ್ಥಿತಿ ಬಂದಿದೆ. ಇದು ರಾಜ್ಯದ ಮೇಲೆ ಆಗುವ ದೊಡ್ಡ ಹೊರೆ ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ವಿಬಿಜಿ ರಾಮ್ ಜಿ ಕಾಯ್ದೆ ತರುವ ಮುನ್ನ ಕೇಂದ್ರ ಸರಕಾರ ರಾಜ್ಯಗಳ ಸಲಹೆ ಪಡೆಯಬೇಕಾಗಿತ್ತು. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳನ್ನು ಬಿಟ್ಟು ಕಾಯ್ದೆ ರೂಪಿಸಿದ ಬಗ್ಗೆಯೂ ರಾಜ್ಯ ಸರಕಾರದ ವಿರೋಧವಿದೆ. ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸರಕಾರ ಹಂತ ಹಂತವಾಗಿ ಕನಿಷ್ಠ 80:20ರ ಅನುಪಾತದಲ್ಲಾದರೂ ರಾಜ್ಯಗಳ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ವಿಬಿಜಿ ರಾಮ್ ಜಿ ಅಡಿ ರಾಜ್ಯಕ್ಕೆ 5,709 ಕೋಟಿ ರೂ. ಹಂಚಿಕೆ ಮಾಡಿದೆ. ಗ್ರಾಮೀಣ ಜನರಿಗೆ ತೊಂದರೆ ಆಗದಂತೆ ಯೋಜನೆಗೆ ರಾಜ್ಯ ಸರಕಾರದ ವತಿಯಿಂದ 3,806 ಕೋಟಿ ರೂ. ಭರಿಸಬೇಕಾಗುತ್ತದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಅವರು ಸಮ್ಮತಿಸಿದ್ದಾರೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಕೇಂದ್ರ ಸರಕಾರ ಅವೈಜ್ಞಾನಿಕವಾಗಿ ಬೇಸಾಯದ ಸಮಯದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡದಿರುವಂತೆ ಸೂಚಿಸಿದೆ. ಇದು ಗ್ರಾಮೀಣ ಕುಟುಂಬಗಳಿಗೆ ಮಾರಕವಾಗಿದೆ. ಕಾರಣ ಈಗ ಅತ್ಯಾಧುನಿಕ ಕೃಷಿ ಯಂತ್ರೋಪಕರಣ ಬಂದಿದ್ದು, ಗ್ರಾಮೀಣ ಕುಟುಂಬಗಳಿಗೆ ಬೇಸಾಯದ ಸಮಯದಲ್ಲೂ ಕೃಷಿ ಉದ್ಯೋಗ ಲಭಿಸುವುದಿಲ್ಲ. ಹೀಗಾಗಿ ವಿಬಿಜಿ ರಾಮ್ ಜಿ ಅವರ ಅನ್ನವನ್ನು ಕಸಿದುಕೊಂಡಂತೆ ಮಾಡಿದೆ. ಇದರ ವಿರುದ್ಧ ರಾಜ್ಯ ಸರಕಾರ ಆಕ್ಷೇಪಣೆ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.

ಜೂ.28ರಂದು ದಿಲ್ಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರೊಂದಿಗೆ ಎಲ್ಲ ರಾಜ್ಯಗಳ ಸಚಿವರ ಸಭೆ ಇದ್ದು, ಈ ಸಭೆಯಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಪ್ರಸ್ತಾಪಿಸಲಾಗುವುದು. ಬೇಡಿಕೆ ಆಧಾರದಲ್ಲಿ ಉದ್ಯೋಗ ನೀಡಬೇಕು ಎಂಬುದು ನಮ್ಮ ಒತ್ತಾಯ. ನಮ್ಮ ರಾಜ್ಯದಲ್ಲಿ 375 ರೂ. ಕೂಲಿ ಇದೆ. ರಾಜ್ಯ ಸರಕಾರ ಕನಿಷ್ಠ ವೇತನವನ್ನು ಹೆಚ್ಚಳ ಮಾಡಿದೆ. ಇದಕ್ಕೆ ಹೊಂದುವಂತೆ ಕೇಂದ್ರವೂ ಕನಿಷ್ಠ ಕೂಲಿ ಹೆಚ್ಚಿಸಬೇಕು ಎಂದು ಈಶ್ವರ್ ಖಂಡ್ರೆ ಒತ್ತಾಯಿಸಿದರು.

ಕಳೆದ 3 ತಿಂಗಳಲ್ಲಿ ರಾಜ್ಯದಲ್ಲಿ 1.40 ಲಕ್ಷ ಮಾನವ ದಿನ ಸೃಷ್ಟಿಸಲಾಗಿದೆ. 9 ಕೋಟಿ ವಾರ್ಷಿಕ ಗುರಿ ಇಟ್ಟುಕೊಂಡಿದೆ. ಪ್ರತಿ ತಿಂಗಳೂ 80 ರಿಂದ 90 ಲಕ್ಷ ಮಾನವ ದಿನ ಸೃಷ್ಟಿ ನಮ್ಮ ಗುರಿಯಾಗಿದೆ. ಈಗಾಗಲೆ ನರೇಗಾ ಅಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 7 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಜೀವನೋಪಾಯಕ್ಕೆ ತೊಂದರೆ ಆಗದ ರೀತಿಯಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಂದು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News