ತುಂಗಭದ್ರಾ ಜಲಾಶಯದ ಹೊಸ ಗೇಟ್‍ಗಳ ಉದ್ಘಾಟನೆ; ಸಾರ್ಥಕಭಾವ ಮೂಡಿಸಿದೆ: ಸಿದ್ದರಾಮಯ್ಯ
ಬೆಂಗಳೂರು : ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‍ಗಳ ಅಳವಡಿಕೆ ಯಶಸ್ವಿಯಾಗಿ ಮುಗಿದು ಉದ್ಘಾಟನೆಗೊಳ್ಳುತ್ತಿರುವುದು ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ನೀರಿನ ರಭಸಕ್ಕೆ ತುಂಗಭದ್ರಾ ಜಲಾಶಯದ 19ನೆ ಕ್ರಸ್ಟ್ ಗೇಟ್ ಕೊಚ್ಚಿ ಹೋದದ್ದು ತುಂಗಭದ್ರಾ ಜಲಾನಯನ ಪ್ರದೇಶದ ರೈತರ ಭವಿಷ್ಯವನ್ನು ಅನಿಶ್ಚಿತತೆಗೆ ದೂಡಿತ್ತು ಎಂದು ಹೇಳಿದ್ದಾರೆ.
ರೈತರ ಈ ಆತಂಕವನ್ನು ಅರ್ಥೈಸಿಕೊಂಡು, ತತ್ ಕ್ಷಣದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿ, ಆದಷ್ಟು ಶೀಘ್ರ ಗೇಟ್ ಅಳವಡಿಕೆ ಮಾಡಿ ನೀರು ಪೋಲಾಗುವುದನ್ನು ತಡೆಯುವಂತೆ ಸೂಚಿಸಿದ್ದೆ. ಕೇವಲ 6 ದಿನಗಳ ಒಳಗೆ ಹೊಸ ಗೇಟ್ ಅಳವಡಿಕೆ ಮಾಡುವ ಮೂಲಕ ಜಲಾಶಯದ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆದು, ಅನ್ನದಾತರ ಆತಂಕವನ್ನು ನಿವಾರಣೆ ಮಾಡಿದ್ದೆವು ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ಆದರೆ, ಇದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂಬ ಅರಿವು ನಮ್ಮ ಸರಕಾರಕ್ಕೆ ಇದ್ದುದ್ದರಿಂದಲೆ ತಜ್ಞರ ಸಮಿತಿಯ ಮೂಲಕ ಜಲಾಶಯದ ಉಳಿದೆಲ್ಲಾ ಗೇಟ್ ಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ, ಅವರಿಂದ ವರದಿ ಪಡೆದಿದ್ದೆವು. ಸುಮಾರು 70 ವರ್ಷಗಳಷ್ಟು ಹಳೆಯದಾಗಿರುವ ಜಲಾಶಯದ ಗೇಟ್ ಗಳನ್ನು ಬದಲಾವಣೆ ಮಾಡುವುದು ಉತ್ತಮ ಎಂಬ ಅಭಿಪ್ರಾಯ ತಜ್ಞರ ವರದಿಯಲ್ಲಿ ಬಂದಿತ್ತು ಎಂದು ಅವರು ಹೇಳಿದ್ದಾರೆ.
ರೈತರ ಹಿತಕಾಯುವ ವಿಚಾರದಲ್ಲಿ ನನ್ನ ಇಡೀ ರಾಜಕೀಯ ಬದುಕಿನಲ್ಲಿ ರಾಜಿಯಾದವನಲ್ಲ, ವರದಿ ನನ್ನ ಗಮನಕ್ಕೆ ಬಂದ ತಕ್ಷಣವೇ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಹೊಸ ಗೇಟ್ ಅಳವಡಿಕೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುಮಾರು 51 ಕೋಟಿ ರೂ. ವೆಚ್ಚದ ಹೊಸ ಗೇಟ್ ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡು, ನಾಳೆ ಉದ್ಘಾಟನೆಗೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರ. ಅತ್ಯಂತ ಕಡಿಮೆ ಅವಧಿಯಲ್ಲಿ ಗೇಟ್ ಗಳ ಅಳವಡಿಕೆ ಕಾರ್ಯ ಆರಂಭಿಸಿ, ಈ ವರ್ಷದ ಮಳೆಗಾಲದಲ್ಲಿ ಜಲಾಶಯದ ನೀರಿನ ಸಂಗ್ರಹಣೆಗೆ ಯಾವುದೆ ಸಮಸ್ಯೆಗಳು ಎದುರಾಗದಂತೆ ಕಾಮಗಾರಿ ಪೂರ್ಣಗೊಳಿಸಿರುವ ನೀರಾವರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕಾಮಗಾರಿ ನಡೆಸಿದ ಕಂಪೆನಿ, ಎಲ್ಲ ತಂತ್ರಜ್ಞರು ಹಾಗೂ ಸರಕಾರದ ಸಚಿವರಿಗೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.