ದೇವನಹಳ್ಳಿ ಭೂಸ್ವಾಧೀನ: ಎಕರೆಗೆ 2.70 ಕೋಟಿ ರೂ.ಪರಿಹಾರಕ್ಕೆ ಶಿಫಾರಸು
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ, ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದಲ್ಲಿ ಕೈಗಾರಿಕಾ ಉದ್ದೇಶಕ್ಕೆ ರೈತರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡಲು ಒಪ್ಪಿರುವ 120 ಎಕರೆ ಜಮೀನಿಗೆ ಪ್ರತೀ ಎಕರೆಗೆ 2.70 ಕೋಟಿ ರೂ.ಪರಿಹಾರವನ್ನು ‘ಭೂ ದರ ನಿರ್ಧಾರಣಾ ಸಲಹಾ ಸಮಿತಿ’ ನಿಗದಿಪಡಿಸಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಶಿಫಾರಸು ಮಾಡಿದೆ.
ಬುಧವಾರ ಇಲ್ಲಿನ ಅರವಿಂದ ಭವನದಲ್ಲಿ ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಎ.ಎನ್.ರಘುನಂದನ್ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳು ಹಾಗೂ ಭೂ ಮಾಲಕರ ಜಂಟಿ ಸಭೆಯಲ್ಲಿ ಈ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ.
ಈ ತೀರ್ಮಾನವನ್ನು ಕೆಐಎಡಿಬಿ ಮಂಡಳಿಯ ಅನುಮೋದನೆಗಾಗಿ ಕಳುಹಿಸಿ ಕೊಡಲಾಗುವುದು. ಪರಿಹಾರವನ್ನು ಹಣದ ರೂಪದಲ್ಲಿ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಪ್ರತೀ ಎಕರೆ ಕೃಷಿ ಜಮೀನಿಗೆ ಅಭಿವೃದ್ಧಿ ಪಡಿಸಿದ ಕೈಗಾರಿಕಾ ಬಡಾವಣೆಯಲ್ಲಿ 10,781ಚದರ ಅಡಿ ಜಾಗವನ್ನು ಪಡೆದುಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ರಘುನಂದನ್ ತಿಳಿಸಿದ್ದಾರೆ.
ಈ ಜಮೀನುಗಳನ್ನು ರೈತರು ತಾವಾಗಿಯೇ ಬಿಟ್ಟುಕೊಡುತ್ತಿದ್ದು, ಈ ಸಂಬಂಧ ಕೆಐಎಡಿಬಿ ಕಾಯ್ದೆಯನುಸಾರ ಇದೇ ತಿಂಗಳ 16ರಂದು ಅಂತಿಮ ಅಧಿಸೂಚನೆ ಹೊರಡಿಸಿ, ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿತ್ತು.
ಇದೀಗ ನಿಗದಿಪಡಿಸಿರುವ ಪರಿಹಾರ ದರವು ದೇವನಹಳ್ಳಿ ಭಾಗದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಸಂತ್ರಸ್ತ ರೈತರಿಗೆ ನ್ಯಾಯಯತ ಪರಿಹಾರ ಕೊಡಬೇಕೆಂಬುದು ರಾಜ್ಯ ಸರಕಾರದ ಆಶಯವಾಗಿದೆ ಎಂದು ಅವರು ಹೇಳಿದ್ದಾರೆ. ಸಭೆಯಲ್ಲಿ ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಸೂರಜ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.