ʼಸಚಿವ ಸ್ಥಾನದ ಲಾಬಿಗೆ ಅವಕಾಶ ನೀಡಬೇಡಿʼ: ಮಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ಸೂಚನೆ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಸಂಪುಟದಲ್ಲಿ ಸ್ಥಾನ ಪಡೆಯಲು ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಲಾಬಿ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ. ಬೆಂಬಲಿಗರ ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯಲ್ಲಿ ಒತ್ತಡ ಹಾಕುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು’ ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನವನ್ನು ಪಡೆಯಲು ಆಕಾಂಕ್ಷಿ ಶಾಸಕರಿಂದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು, ಸಿಎಂ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಮೇಲ್ಕಂಡಂತೆ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ.
ಕೆಲ ದಿನಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರುಗಳ ಬೆಂಬಲಿಗರು ಧರಣಿ, ಹೋರಾಟಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಸ್ವಾಮೀಜಿಗಳು ಹಾಗೂ ಧಾರ್ಮಿಕ ಗುರುಗಳ ಮೂಲಕ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವ ಪ್ರಯತ್ನಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಇದು ಪಕ್ಷಕ್ಕೆ ತೀವ್ರ ಮುಜುಗರ ಸೃಷ್ಟಿಸುತ್ತಿದೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು, ತಮ್ಮ ಬೆಂಬಲಿಗರೊಂದಿಗೆ ಯಾವುದೇ ಮುಖಂಡರ ಭೇಟಿಗೆ ಅವಕಾಶ ನೀಡಬೇಡಿ. ಸಚಿವ ಸ್ಥಾನಕ್ಕೆ ಲಾಬಿ ಮಾಡುವುದು, ರಾಜಕೀಯವಾಗಿ ಒತ್ತಡ ಹಾಕುವುದು ಹಾಗೂ ಇತರೆ ಬೆಳವಣಿಗೆಗಳನ್ನು ಕಾಂಗ್ರೆಸ್ ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದು ಒಳ್ಳೆಯದಲ್ಲ. ಈ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ಪಕ್ಷ ಅನುಸರಿಸಲಿದೆ. ಸೂಕ್ತ ಸಂದರ್ಭದಲ್ಲಿ ಪಕ್ಷವು ಸಂಪುಟ ವಿಸ್ತರಣೆ ಬಗ್ಗೆ ಕ್ರಮ ಕೈಗೊಳ್ಳಲಿದೆ. ಒಂದು ವೇಳೆ ಇಂತಹ ಪ್ರಯತ್ನಗಳು ಮತ್ತೆ ನಡೆದರೆ ಪಕ್ಷ ಅದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.