×
Ad

ಜನೌಷಧಿ ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧಿಗಳ ಮಾರಾಟ: ರಾಜ್ಯದ 133 ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಜಾರಿ

Update: 2026-06-24 19:58 IST

ಸಾಂದರ್ಭಿಕ ಚಿತ್ರ | PC :  magnific.com

ಬೆಂಗಳೂರು : ಜನಸಾಮಾನ್ಯರಿಗಾಗಿ ರಿಯಾಯಿತಿ ದರದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುವ ಉದ್ದೇಶದೊಂದಿಗೆ ಆರಂಭವಾದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಇದೀಗ ನಿಯಮಬಾಹಿರವಾಗಿ ಬ್ರ್ಯಾಂಡೆಡ್ ಔಷಧಿಗಳ ಮಾರಾಟದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಔಷಧ ನಿಯಂತ್ರಣ ಇಲಾಖೆಯು ಜೂ.22 ಹಾಗೂ 23ರಂದು ರಾಜ್ಯದ 172 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮೇಲೆ ದಾಳಿ ಮಾಡಿದ್ದು, ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 133 ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಹೊರಡಿಸಿದೆ.

ರಾಜ್ಯದಲ್ಲಿ ಸದ್ಯ, 1200ಕ್ಕೂ ಹೆಚ್ಚು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕೇಂದ್ರಗಳಲ್ಲಿ ಜೆನೆರಿಕ್ ಔಷಧಿಗಳ ಬದಲಾಗಿ ಖಾಸಗಿ ಕಂಪೆನಿಗಳ ದುಬಾರಿ ಬೆಲೆಯ ಬ್ರ್ಯಾಂಡೆಡ್ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ತಂಡವು ರಾಜ್ಯಾದ್ಯಂತ ಒಟ್ಟು 172 ಜನೌಷಧಿ ಕೇಂದ್ರಗಳ ಮೇಲೆ ಎರಡು ದಿನಗಳು ಅನಿರೀಕ್ಷಿತ ದಾಳಿ ನಡೆಸಿದ್ದು, ಈ ಪೈಕಿ 133 ಕೇಂದ್ರಗಳಲ್ಲಿ ನಿಯಮಬಾಹಿರವಾಗಿ ದುಬಾರಿ ಬೆಲೆಯ ಔಷಧಿಗಳ ಮಾರಾಟ ಆಗಿರುವುದನ್ನು ಸಾಕ್ಷ್ಯಸಮೇತ ಪತ್ತೆಹಚ್ಚಿದೆ.

ಮುಂಬರುವ ದಿನಗಳಲ್ಲಿ ರಾಜ್ಯದ ಉಳಿದ ಎಲ್ಲ ಜನೌಷಧಿ ಕೇಂದ್ರಗಳ ಮೇಲೂ ಹಂತ-ಹಂತವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿರುವ ಎಲ್ಲ 133 ಜನೌಷಧಿ ಕೇಂದ್ರಗಳ ಮಾಲಕರಿಗೆ ಇಲಾಖೆ ಈಗ ಶೋಕಾಸ್ ನೋಟಿಸ್ ನೀಡಿದ್ದು, ನಿಗದಿತ ಅವಧಿಯೊಳಗೆ ಸೂಕ್ತ ವಿವರಣೆ ನೀಡುವಂತೆ ಆದೇಶಿಸಲಾಗಿದೆ.

ಜನೌಷಧಿ ಕೇಂದ್ರದ ನಿಯಮಾವಳಿಗಳನ್ನು ಮೀರಿ ಜನಸಾಮಾನ್ಯರಿಗೆ ಬ್ರ್ಯಾಂಡೆಡ್ ಔಷಧಿಗಳನ್ನು ಏಕೆ ಮಾರಾಟ ಮಾಡಲಾಗುತ್ತಿದೆ? ಎಂಬುದಕ್ಕೆ ಮಾಲಕರು ಲಿಖಿತ ಉತ್ತರ ನೀಡಬೇಕು. ನಿಗದಿತ ಸಮಯದಲ್ಲಿ ನೋಟಿಸ್‍ಗೆ ಉತ್ತರ ನೀಡದಿದ್ದರೆ ಅಂತಹ ಕೇಂದ್ರಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಲು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಔಷಧ ನಿಯಂತ್ರಣ ಇಲಾಖೆ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

‘ಜನೌಷಧಿ ಮಳಿಗೆಗಳ ಸ್ಥಾಪನೆ, ನವೀಕರಣದ ವೇಳೆ ಯಾವುದೇ ರಿಯಾಯಿತಿ ಫಲಕ ಪ್ರದರ್ಶಿಸುವುದಿಲ್ಲ ಎಂದು ವರ್ತಕರು ಪ್ರಮಾಣ ಪತ್ರ ಸಲ್ಲಿಸಬೇಕು. ಮಳಿಗೆಗಳ ಸ್ಥಾಪನೆ ಮಾಡುವ ವೇಳೆ ನಿರ್ದಿಷ್ಟ ಜನೆರಿಕ್ ಔಷಧ ಬಿಟ್ಟು ಬೇರೆ ಔಷಧ ಮಾರಾಟ ಮಾಡುವುದಿಲ್ಲ ಎಂದು ಕರಾರು ವಿಧಿಸಬೇಕು. ಎಲ್ಲ ಜನೌಷಧಿ ಮಳಿಗೆಗಳಿಗೆ ದಾರಿ ತಪ್ಪಿಸುವ ರಿಯಾಯಿತಿ ದರದ ಜಾಹೀರಾತು ಪ್ರದರ್ಶನ ಮಾಡಬಾರದು ಎಂದು ಷರತ್ತು ವಿಧಿಸಬೇಕು. ಭಾರಿ ರಿಯಾಯಿತಿ ನೀಡುವ ಮೂಲಕ ಬಹುರಾಷ್ಟ್ರೀಯ ಔಷಧ ಕಂಪೆನಿಗಳು ಜನರ ದಾರಿ ತಪ್ಪಿಸುತ್ತಿರುವುದನ್ನು ತಡೆಯಬೇಕು. ಜನೌಷಧಿ ಮಳಿಗೆಗಳ ಅಕ್ರಮಗಳ ಮೇಲೆ ರಾಜ್ಯ ಔಷಧ ಆಡಳಿತ ಇಲಾಖೆಯು ಕ್ರಮ ವಹಿಸಬೇಕು ಎಂದು ಕರ್ನಾಟಕ ಫರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯುಟರ್ಸ್ ಆರ್ಗನೈಸೇಶನ್ ಅಧ್ಯಕ್ಷ ಸಿ.ಜಯರಾಂ ಅವರು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ ಮನವಿ ಮಾಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News