×
Ad

ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ : ಬಿ.ವೈ.ವಿಜಯೇಂದ್ರ

"ಕಾಂಗ್ರೆಸ್ಸಿನ ಆಂತರಿಕ ಬಡಿದಾಟದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ"

Update: 2025-11-26 20:03 IST

ಬೆಂಗಳೂರು : ಕಾಂಗ್ರೆಸ್ಸಿನ 140 ಶಾಸಕರಿದ್ದೂ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಗೆ ಬಂದು ಸುಮ್ಮನೇ ಕಾಟಾಚಾರಕ್ಕೆ ಅಧಿವೇಶನ ಮಾಡೋದು ಬೇಡ. ರೈತರು ಚಳಿಗಾಲದ ಅಧಿವೇಶನವನ್ನು ಕಾತರದಿಂದ ಕಾಯುತ್ತಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆ ಜೋಳ, ಭತ್ತ ಬೆಳೆಯುವ ರೈತರು ಸರಕಾರ ಪರಿಹಾರ ನೀಡಲಿದೆ ಎಂದು ಕಾಯುತ್ತಿದ್ದಾರೆ. ಅಡಿಕೆ ಬೆಳೆಗಾರರೂ ಸಂಕಷ್ಟದಲ್ಲಿದ್ದು, ಇದ್ಯಾವುದಕ್ಕೂ ಪರಿಹಾರ ನೀಡುವ ಲಕ್ಷಣ ಕಾಣುತ್ತಿಲ್ಲ ಎಂದು ಆಕ್ಷೇಪಿಸಿದರು.

ಆಡಳಿತ ನಡೆಸಲು ಸಾಧ್ಯವಿದ್ದರೆ ನಡೆಸಿ, ಇದೇ ರೀತಿ ಕಿತ್ತಾಟ ಮಾಡಿಕೊಂಡು ದಿಲ್ಲಿಯಲ್ಲಿ ನಾಲ್ಕು ದಿನ, ಬೆಂಗಳೂರಿನಲ್ಲಿ 3 ದಿನ ಇರುವುದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದ ಅವರು, ಕಾಂಗ್ರೆಸ್‍ನವರು ಬೀದಿಗಿಳಿದು ಪರಸ್ಪರ ಬಡಿಗೆ ತೆಗೆದುಕೊಂಡು ಹೊಡೆದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಅದಕ್ಕೆ ನಾವೇನು ಮಾಡಬೇಕು ಎಂದು ಯೋಚಿಸುತ್ತೇವೆ ಎಂದರು.

ಕಾಂಗ್ರೆಸ್ಸಿನ ಆಂತರಿಕ ಬಡಿದಾಟದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಮುಖ್ಯಮಂತ್ರಿಗೆ ರೈತರ ಸಮಸ್ಯೆಗಳನ್ನು ಪರಿಹರಿಸಲು ಸಮಯ ಸಿಗುತ್ತಿಲ್ಲ. ಮೆಕ್ಕೆಜೋಳಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಳೆದ ವಾರ ಸಭೆ ಕರೆದಾಗ ಕೃಷಿ ಸಚಿವರು ದಿಲ್ಲಿಯಲ್ಲಿದ್ದರು ಎಂದು ವಿಜಯೇಂದ್ರ ಟೀಕಿಸಿದರು.

ಬಾಹ್ಯ ಬೆಂಬಲದ ಪ್ರಶ್ನೆ ಇಲ್ಲ :

ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಲ್ಲಿ ನಮಗೆ ಆಸಕ್ತಿ ಇಲ್ಲ. ಸರಕಾರದಲ್ಲಿ ಡಿ.ಕೆ.ಶಿವಕುಮಾರ್ ಆಗಲೀ, ಬೇರೆ ಯಾರಾದರೂ ಹೊರಗೆ ಬಂದರೆ ಅವರಿಗೆ ಬಾಹ್ಯ ಬೆಂಬಲ ಕೊಡುವುದಾಗಲೀ ಅಥವಾ ಬೆಂಬಲ ಪಡೆಯುವುದಾಗಲೀ ಪ್ರಶ್ನೆ ಉದ್ಭವವಾಗುವುದಿಲ್ಲ. ಮತದಾರರು ನಮ್ಮನ್ನು ವಿಪಕ್ಷವಾಗಿ ಕೂರಿಸಿದ್ದಾರೆ. ವಿಪಕ್ಷವಾಗಿ ಜವಾಬ್ದಾರಿಯುತ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News