×
Ad

RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ನ್ಯಾಯಾಂಗ ತನಿಖೆಗೆ ಬಿ.ವೈ. ವಿಜಯೇಂದ್ರ ಆಗ್ರಹ

Update: 2025-06-04 21:14 IST

ಬಿ.ವೈ.ವಿಜಯೇಂದ್ರ

ಬೆಂಗಳೂರು: RCB ತಂಡವು ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸರಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಬುಧವಾರ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಕಾಲ್ತುಳಿತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಆತುರದ ನಿರ್ಧಾರದಿಂದ ಈ ರೀತಿಯ ದುರ್ಘಟನೆ ಸಂಭವಿಸಿದೆ. ಇದರ ಹೊಣೆ ಯಾರು ಹೊರಬೇಕು? ಎಂಬುದನ್ನು ಸರಕಾರ ವಿವೇಚಿಸಲಿ. ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿಭಾಯಿಸಲಾಗದ ವೈಫಲ್ಯದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ರಾಜ್ಯ ಸರಕಾರ ಈ ಕೂಡಲೇ ನೊಂದ ಕುಟುಂಬಗಳಿಗೆ ಆತ್ಮವಿಶ್ವಾಸ ತುಂಬಬೇಕು, ಸಾಂತ್ವನ ಹೇಳಬೇಕು ಹಾಗೂ ಸೂಕ್ತ ಪರಿಹಾರ ಘೋಷಿಸಬೇಕು, ಅವಶ್ಯಕತೆ ಇರುವವರಿಗೆ ತಕ್ಷಣ ಸೂಕ್ತ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. RCB ವಿಜಯದ ನಂತರ ಇಡೀ ರಾಜ್ಯದಲ್ಲಿ ಬೆಂಗಳೂರೂ ಸೇರಿದಂತೆ ಕೆಲ ಪ್ರಮುಖ ನಗರಗಳಲ್ಲಿ ಜನರು ವಿಜಯೋತ್ಸವದಲ್ಲಿ ಮುಳುಗಿದ್ದು ಅಭಿಮಾನಿಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲಾಗದ ಸ್ಥಿತಿ ನಿನ್ನೆಯೇ ಉದ್ಬವಿಸಿತ್ತು ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇಂದೇ ಸಂಭ್ರಮಾಚರಣೆ ಆಚರಿಸುವ ಕುರಿತು ಸೇರಬಹುದಾದ ಜನರ ಲೆಕ್ಕಾಚಾರವನ್ನು ಅಂದಾಜಿಸಿ ಸರಕಾರ ವಿವೇಚಿಸಿ ನಿರ್ಧಾರ ತೆಗೆದುಕೊಳ್ಳಬಹುದಾಗಿತ್ತು, ಆದರೆ ಆ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಪರಿಸ್ಥಿತಿ ಕೈಮೀರುವ ಹಂತವನ್ನು ಅಂದಾಜಿಸಿ ಮತ್ತೊಂದು ದಿನಾಂಕವನ್ನು ನಿಗದಿಪಡಿಸಬಹುದಿತ್ತು ಎಂದು ವಿಜಯೇಂದ್ರ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News