×
Ad

‘ದಿಲ್ಲಿ ಸ್ಫೋಟ’ | ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದ ಬಿ.ವೈ. ವಿಜಯೇಂದ್ರ

Update: 2025-11-12 23:21 IST

ಬಿ.ವೈ. ವಿಜಯೇಂದ್ರ

ಬೆಂಗಳೂರು: ‘ಹೊಸದಿಲ್ಲಿ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟಕ್ಕೆ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಬುಧವಾರ ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಕಾಂಗ್ರೆಸ್‍ನ ದೇಶ-ವಿರೋಧಿ, ಸಂವೇದನಾರಹಿತ, ಕೀಳು ರಾಜಕೀಯಕ್ಕೆ ಬಿಹಾರದ ಜನತೆ ಉತ್ತರ ನೀಡುತ್ತಿರುವಂತೆಯೇ ರಾಜ್ಯದ ಜನರೂ ತಕ್ಕ ಉತ್ತರ ನೀಡಲಿದ್ದಾರೆ. ಇದು ಪಕ್ಷ ರಾಜಕಾರಣದ ಮಾತಲ್ಲ, ನಿಜವಾದ ದೇಶಭಕ್ತ ಭಾರತೀಯರಿಗೆ ಯಾವಾಗಲೂ ‘ದೇಶ ಮೊದಲು', ಉಳಿದದ್ದೆಲ್ಲವೂ ನಂತರ’ ಎಂದು ‘ಚುನಾವಣೆ ಸಂದರ್ಭದಲ್ಲೇ ಸ್ಫೋಟಗಳು ಏಕೆ ಸಂಭವಿಸುತ್ತವೆ’ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

‘ದಿಲ್ಲಿ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟು, ಹಲವರು ಗಾಯಗೊಂಡ ಭಯೋತ್ಪಾದಕ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಸಿಎಂ ಸಿದ್ದರಾಮಯ್ಯನವರ, ಮತ್ತಿತರ ಕಾಂಗ್ರೆಸ್ ನಾಯಕರ ಬೇಜವಾಬ್ದಾರಿ, ಅಸಂವೇದನೀಯ, ಕೀಳು ರಾಜಕೀಯ ಹೇಳಿಕೆಗಳು ಖಂಡನೀಯ ಮಾತ್ರವಲ್ಲ, ಆತಂಕಕಾರಿಯೂ ಆಗಿದೆ’ ಎಂದು ಅವರು ತಿಳಿಸಿದ್ದಾರೆ.

‘ದೇಶದ ವಿರುದ್ಧ ನಡೆದಿರಬಹುದಾದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಇಡೀ ದೇಶ ಒಂದು ಧ್ವನಿಯಲ್ಲಿ ಮಾತನಾಡಬೇಕಾದ ಸೂಕ್ಷ್ಮ ಸಂದರ್ಭದಲ್ಲೂ ಇವರುಗಳು ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ರಾಜ್ಯದ ದುರಂತ, ದೇಶದ ದೌರ್ಭಾಗ್ಯ. ಕಾಂಗ್ರೆಸ್ ಪಕ್ಷಕ್ಕೆ ದೇಶದ ಭದ್ರತೆ, ನಾಗರಿಕರ ಸಾವು-ನೋವುಗಳು, ನಮ್ಮ ಸೈನಿಕರ ತ್ಯಾಗ, ರಾಷ್ಟ್ರೀಯ ಗೌರವಗಳಂತಹ ವಿಷಯಗಳೂ ಕೇವಲ ರಾಜಕೀಯ ಅಸ್ತ್ರವಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

‘2019ರ ಭೀಕರ ಪುಲ್ವಾಮಾ ದಾಳಿಯ ನಂತರವೂ ಕಾಂಗ್ರೆಸ್ ನಾಯಕರು, ಪಾಕಿಸ್ತಾನದ ಪ್ರಚಾರಕ್ಕೆ ಸಹಾಯವಾಗುವ ಹೇಳಿಕೆಗಳನ್ನು ನೀಡಿದ್ದನ್ನು ದೇಶ ಮರೆತಿಲ್ಲ. ಸಿಎಂ ಈಗಿನ ಹೇಳಿಕೆ ಕಾಂಗ್ರೆಸ್‍ನ ಅದೇ ರಾಷ್ಟ್ರ ವಿರೋಧಿ ಪರಂಪರೆಯ ಮುಂದುವರಿಕೆಯಾಗಿದೆ. ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಬಂದಾಗ ಇಡೀ ದೇಶ ಒಗ್ಗಟ್ಟಿನಿಂದ ನಿಲ್ಲಬೇಕು.

ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್ ನಾಯಕರ ಧೋರಣೆ ಅವರ ಅಸಲಿಯತ್ತನ್ನು ಬಯಲು ಮಾಡಿದೆ. ದೇಶದ ಭದ್ರತೆ ವಿಷಯದಲ್ಲಿ ದೇಶ ಒಂದಾಗಿರಬೇಕೆಂದು ಆಗ ಪ್ರತಿಪಕ್ಷ ರಾಜಕೀಯ ನಡೆಸಲಿಲ್ಲ. ರಾಜ್ಯದ ಆಡಳಿತ ವೈಫಲ್ಯ, ಶೂನ್ಯ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಉತ್ತರದಾಯಿಗಳಾಗಿರುವ ಸಿಎಂ ಮತ್ತು ಆಡಳಿತ ಪಕ್ಷದ ನಾಯಕರು, ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಅಗ್ಗದ ರಾಜಕೀಯ ತಂತ್ರ ಅನುಸರಿಸುತ್ತಿರುವುದನ್ನು ನೋಡಿ ಜನರೇ ಛೀಮಾರಿ ಹಾಕುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News