ಕೇಂದ್ರ ಕಾರಾಗೃಹಗಳಲ್ಲಿ ಟಿ-ಎಚ್‍ಸಿಬಿಎಸ್ ಅಳವಡಿಕೆಗೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು, ಸೆ.18 : ಬಳ್ಳಾರಿ, ವಿಜಯಪುರ, ಧಾರವಾಡ, ಶಿವಮೊಗ್ಗ, ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ತುಮಕೂರು ಜಿಲ್ಲೆಯಲ್ಲಿರುವ ಕೇಂದ್ರ ಕಾರಾಗೃಹಗಳಲ್ಲಿ ಒಟ್ಟು 16.75 ಕೋಟಿ ರೂ.ಗಳ ಮೊತ್ತದಲ್ಲಿ 10 ಟವರ್ ಆಫ್ ದ ಹಾರ್ಮೋನಿಯಸ್ ಕಾಲ್ ಬ್ಲಾಕಿಂಗ್ ಸಿಸ್ಟಂ(ಟಿ-ಎಚ್‍ಸಿಬಿಎಸ್) ಮೊಬೈಲ್ ಟವರ್‍ಗಳನ್ನು ಅಳವಡಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ಮಾಹಿತಿಯನ್ನು ನೀಡಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ 9 ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್ ಕೆರೆಗಳಿಗೆ ಮಲಪ್ರಭಾ ಬಲದಂಡೆ ಕಾಲುವೆ ಚೈನೇಜ್ 129+00 ಕಿ.ಮೀ ನಿಂದ ನೀರನ್ನು ಎತ್ತಿ ತುಂಬಿಸುವ ಯೋಜನೆಯನ್ನು 43.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಎಂದು ಅವರು ಹೇಳಿದರು.
ಮಲಪ್ರಭಾ ಬಲದಂಡೆ ಕಾಲುವೆಯ 56ಎ, 56ಬಿ, 56ಸಿ, 57 ಮತ್ತು ಇಟಗಿ ವಿತರಣಾ ಕಾಲುವೆಗಳ ಮೊದಲನೇ ಹಂತದ ಆಧುನೀಕರಣ ಕಾಮಗಾರಿಗಳನ್ನು 31.08 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
ವಿಜಯಪುರ ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಒಟ್ಟಾರೆ 618.75 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಮೂಲ ವೆಚ್ಚ 347.92 ಕೋಟಿ ರೂ.ಗಳಾಗಿತ್ತು. ಪರಿಷ್ಕೃತ ಮೊತ್ತದಲ್ಲಿ 270.83 ಕೋಟಿ ರೂ.ಗಳ ಹೆಚ್ಚಳವಾಗಿದ್ದರಿಂದ ಮುಖ್ಯ ಕಾರ್ಯದರ್ಶಿ ಸಲಹೆಯಂತೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿರಲಿಲ್ಲ. ಇಂದಿನ ಸಭೆಯಲ್ಲಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರಜಾಸೌಧ, ತಾಲೂಕು ಆಡಳಿತ ಕೇಂದ್ರ ಕಟ್ಟಡದ ನಿರ್ಮಾಣ ಕಾಮಗಾರಿಗೆ ಈಗಾಗಲೆ 10 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನೂ ಹಾಗೂ 2ನೆ ಹಂತದ ಕಾಮಗಾರಿಗೆ ತಗಲುವ ವೆಚ್ಚ 6 ಕೋಟಿ ರೂ. ಒಳಗೊಂಡಂತೆ ಒಟ್ಟು 16 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಎಂದು ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಆಡಳಿತ ಕೇಂದ್ರ ಪ್ರಜಾಸೌಧ ಕಟ್ಟಡದ 2ನೇ ಹಂತದ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 55 ಕೋಟಿ ರೂ.ಗಳಿಗೆ ಹಾಗೂ ಗದಗ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿತವಾಗಿರುವ ಮಹಾತ್ಮ ಗಾಂಧಿ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಅವಶ್ಯವಿರುವ ಆಡಳಿತ ವಿಭಾಗದ ಕಟ್ಟಡ, ಶಾಲಾ ಕೊಠಡಿಗಳ ನಿರ್ಮಾಣ, ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳ ನಿರ್ಮಾಣ, ಗ್ರಂಥಾಲಯ ಹಾಗೂ ಕ್ರೀಡಾಂಗಣ ಸಮುಚ್ಛಯ ನಿರ್ಮಾಣದ ಪರಿಷ್ಕೃತ ಅಂದಾಜು ಮೊತ್ತ 48.43 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.