ಭೂಕುಸಿತ ತಡೆಗಟ್ಟಲು 720 ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ತೀರ್ಮಾನ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ 7 ಜಿಲ್ಲೆಗಳಾದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ಪುನರಾವರ್ತಿತ ಭೂಕುಸಿತವನ್ನು ತಡೆಗಟ್ಟಲು 720 ಕಾಮಗಾರಿಗಳನ್ನು 466.93 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಷಯವನ್ನು ತಿಳಿಸಿದರು.
ಕೃಷಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ‘ಕೃಷಿ ಭಾಗ್ಯ’ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಸೂಕ್ತ ಸ್ಥಳದಲ್ಲಿ ಹೊಂಡ ತೆಗೆದು ಸಂಗ್ರಹಿಸಿ, ಬೆಳೆಗಳಿಗೆ ಸಂದಿಗ್ದ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವ ಸಲುವಾಗಿ 200 ಕೋಟಿ ರೂ. ಅನುದಾನವನ್ನು ಕೃಷಿ ಇಲಾಖೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ವತಿಯಿಂದ ವಿಶ್ವ ಬ್ಯಾಂಕ್‍ನ ಆರ್ಥಿಕ ನೆರವಿನೊಂದಿಗೆ ಅಂದಾಜು 550 ಕೋಟಿ ರೂ.ಗಳ ವೆಚ್ಚದಲ್ಲಿ, ಬೆಂಗಳೂರು ನಗರದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಲಿಫ್ಟ್-4 ವೃಷಭಾವತಿ ವ್ಯಾಲಿ ಯೋಜನೆ-ಹಂತ 2ರ ಮೂಲಕ ನೀರನ್ನು ತುಂಬಿಸುವ ಯೋಜನೆಗೆ 300 ಕೋಟಿ ರೂ. ಅನುದಾನವನ್ನು ಸಣ್ಣ ನೀರಾವರಿ ಇಲಾಖೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಇತರ ನಿರ್ಣಯಗಳು:
ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ 2ನೇ ಆವೃತ್ತಿಯನ್ನು 40.29 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲು, ರಾಜ್ಯ ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ 110 ಜಂಕ್ಷನ್‍ಗಳಲ್ಲಿ ಬೆಂಗಳೂರು ನಗರಕ್ಕೆ ಅವಶ್ಯಕವಿರುವ ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್‍ಗಳನ್ನು 56.45 ಕೋಟಿ ರೂ.ಮೊತ್ತದಲ್ಲಿ ಅನುಷ್ಠಾನಗೊಳಿಸಲು ಹಾಗೂ ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಣಯ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಸ್ಥಾಪಿಸಲು ಬಜೆಟ್‍ನಲ್ಲಿ ಘೋಷಿಸಿರುವಂತೆ, ಮೊದಲನೇ ಹಂತದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ 95.60 ಕೋಟಿ ರೂ.ಗಳಲ್ಲಿ ಮೇಲ್ದರ್ಜೆಗೇರಿಸಲು ಅನುಮೋದನೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಿರ್ಮಿಸಲು ಮಂಜೂರಾಗಿರುವ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕವನ್ನು (ಸಿಸಿಬಿ)ಬೈಲಹೊಂಗಲ ತಾಲೂಕು ಆಸ್ಪತೆಗೆ ಸ್ಥಳಾಂತರಿಸಿ, 23.75 ಕೋಟಿ ರೂ.ಗಳಲ್ಲಿ ನಿರ್ಮಿಸಲು ಅನುಮೋದನೆ. ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವಿಸ್ತರಣೆ ಹಾಗೂ ಆಧುನೀಕರಣದ 329 ಕೋಟಿ ರೂ.ಗಳ ಪರಿಷ್ಕøತ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
ಹೊಸದಿಲ್ಲಿಯ ಚಾಣಕ್ಯಪುರಿಯ ಸರ್ದಾರ್ ಪಟೇಲ್ ಮಾರ್ಗದಲ್ಲಿರುವ ಕರ್ನಾಟಕ ಭವನ-2 (ಶರಾವತಿ) ಕಟ್ಟಡದ ನವೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯನ್ನು 16.30 ಕೋಟಿ ರೂ. ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ತಾಲೂಕು ಪ್ರಜಾಸೌಧ ಕಟ್ಟಡವನ್ನು 16 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
ಬೆಂಗಳೂರು ಕೇಂದ್ರ, ಬೆಳಗಾವಿ, ಮಂಗಳೂರು, ಭಾಲ್ಕಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ, ಧಾರವಾಡ ಪಶ್ಚಿಮ, ಕಲಬುರಗಿ ಮತ್ತು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಲ್ಲಿನ 2019ರ ಮಾ.31ರ ಪೂರ್ವದಲ್ಲಿ ನೋಂದಣಿಯಾದ ವಾಹನಗಳ ದಾಖಲೆಗಳನ್ನು 40 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಡಿಜಿಟಲೀಕರಣಗೊಳಿಸುವ ಯೋಜನೆಗೆ ಅನುಮೋದನೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರಕ್ಕೆ 2ನೇ ಹಂತದ ಒಳಚರಂಡಿ ವ್ಯವಸ್ಥೆ ಒದಗಿಸುವ 128.74 ಕೋಟಿ ರೂ.ಗಳ ವಿಸ್ತøತ ಯೋಜನಾ ವರದಿಗೆ ಹಾಗೂ ಬೆಂಗಳೂರಿನ ಇನ್ಸ್‍ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್‍ಪ್ಲಾಂಟ್ ಸಂಸ್ಥೆಗೆ ಅವಶ್ಯವಿರುವ ರೋಬೋಟಿಕ್ ವೈದ್ಯಕೀಯ ಉಪಕರಣವನ್ನು 20 ಕೋಟಿ ರೂ.ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಿ ಬೆಟ್ಟದ ಬಳಿ ಆವತಿ ಗ್ರಾಮದ ಕೂಡುಗುರ್ಕಿ ಹಾಗೂ ಕೆಜಿಎಫ್‍ನ ಕೈಗಾರಿಕಾ ಕಾರಿಡಾರ್, ಕೈಗಾರಿಕಾ ಟೌನ್‍ಶಿಪ್ ಪ್ರದೇಶದ ಬಂಗಾರದ ಗಣಿ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿಸಿರುವ ಎರಡು ಐ.ಆರ್.ಬಿ ಪಡೆಗಳಿಗೆ ಅವಶ್ಯವಿರುವ ಮೂಲಭೂತ ವಸತಿ/ವಸತಿಯೇತರ ಸೌಕರ್ಯಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ಒದಗಿಸಲು ನಿರ್ಣಯ.
ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಭಿಸಲು ಅಗತ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, ಬಾಲಕ, ಬಾಲಕಿಯರ ಹಾಸ್ಟೆಲ್‍ಗಳು, ಬೋಧಕ ಸಿಬ್ಬಂದಿಗಳ ವಸತಿ ಗೃಹಗಳು ಹಾಗೂ ಇತರೆ ಪೂರಕವಾದ ಕಾಮಗಾರಿಗಳಿಗೆ ಅವಶ್ಯವಿರುವ 450 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.
10,450 ಗ್ರಾಮ ಸಹಾಯಕರಿಗೆ ಸೇವೆಯಿಂದ ನಿವೃತ್ತಿ ಹೊಂದಿದಾಗ 5 ಲಕ್ಷ ರೂ.ಗಳ ಇಡಿಗಂಟನ್ನು ನೀಡಲು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಿಪಿಪಿ ಮಾದರಿಯಲ್ಲಿ ಪ್ರತಿನಿತ್ಯ 1750 ಮೆ. ಟನ್ ಕಟ್ಟಡಗಳ ಹಾಗೂ ನಿರ್ಮಾಣ ಸಾಮಗ್ರಿಗಳ ಭಗ್ನಾವಶೇಷ ತ್ಯಾಜ್ಯದ ಸಂಗ್ರಹಣೆ ಮತ್ತು ವಿಲೇವಾರಿ ಮಾಡುವ (750 ಟಿಪಿಡಿಯ ಒಂದು ಪ್ಯಾಕೇಜ್ ಹಾಗೂ 500 ಟಿಪಿಡಿಯ ಎರಡು ಪ್ಯಾಕೇಜ್) ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಿಆರ್‍ಪಿ ರೈಸಿಂಗ್ ಮೇನ್ ಸೇರಿ ರಾಜಕಾಲುವೆಯ ಬಳಿಯಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಆವರಣದಲ್ಲಿರುವ ಸಂಸ್ಕರಿಸಿದ ನೀರಿನ ಪಂಪಿಂಗ್ ಸ್ಟೇಷನ್, ದೇವನಹಳ್ಳಿ ಬಳಿಯ ಐಟಿ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿರುವ 40 ಎಂಎಲ್‍ಡಿ ಸಾಮರ್ಥ್ಯದ ತೃತೀಯ ಹಂತದ ಸಂಸ್ಕರಣಾ ಘಟಕದ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 45 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಕೆ.ಆರ್.ಪುರ ಸಮೀಪದ ಎಲೆಮಲ್ಲಪ್ಪ ಶೆಟ್ಟಿ ಕೆರೆ ಬಳಿಯಿರುವ 15 ದ.ಲ.ಲೀ ಸಾಮಥ್ರ್ಯದ ತ್ಯಾಜ್ಯ ನೀರು ಶುದ್ದೀಕರಣ ಘಟಕವನ್ನು ಮತ್ತು ಸಾದರಮಂಗಲದಲ್ಲಿ 5 ದ.ಲ.ಲೀ ಸಾಮಥ್ರ್ಯದ ಇಂಟರ್‍ಮೀಡಿಯಟ್ ಸೀವೇಜ್ ಪಂಪಿಂಗ್ ಸ್ಟೇಷನ್ ಮತ್ತು ಸುಮಾರು 3.5 ಕಿ.ಮೀಗಳ 450 ಎಂ.ಎಂ ಡಕ್ಟೈಲ್ ಐರನ್ ಪೈಪ್‍ಲೈನ್‍ನ 5 ವರ್ಷಗಳ ಸಮಗ್ರ ಕಾರ್ಯಚರಣೆ ಮತ್ತು ನಿರ್ವಹಣೆಯನ್ನು 19.07 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
ವಿಧೇಯಕಗಳು:
ರಾಜ್ಯದ ಎಲ್ಲ ಸಿಬ್ಬಂದಿಗಳಿಗೂ ಮುಂಭಡ್ತಿ ಹೊಂದಲು ತರಬೇತಿಯನ್ನು ಕಡ್ಡಾಯಗೊಳಿಸಲು ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಮುಂಭಡ್ತಿಗಾಗಿ ಕಡ್ಡಾಯ ತರಬೇತಿ)ನಿಯಮಗಳು-2025, ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ)ವಿಧೇಯಕ-2025, ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ-2025 ಹಾಗೂ ‘ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ, 2025-32’ಕ್ಕೆ ಸಚಿವ ಸಂಪುಟ ಅನುಮೋದನೆ.
ಕಾಂಗ್ರೆಸ್ ಕಚೇರಿಗಳಿಗೆ ನಿವೇಶನ:
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸ.ನಂ.110 ರಲ್ಲಿ 9 1/2 ಗುಂಟೆ ಸರಕಾರಿ ಬಿ-ಖರಾಬು ಜಮೀನನ್ನು ತಾಲೂಕು ಕಾಂಗ್ರೆಸ್ ಸಮಿತಿಗೆ ಕಾಂಗ್ರೆಸ್ ಕಚೇರಿ ಕಟ್ಟಡದ ನಿರ್ಮಾಣಕ್ಕಾಗಿ ಗುತ್ತಿಗೆ ಆಧಾರದ ಮೆಲೆ ನೀಡಿರುವ ಗುತ್ತಿಗೆ ಅವಧಿಯನ್ನು 15 ವರ್ಷ ವಿಸ್ತರಿಸಲು, ಚನ್ನರಾಯಪಟ್ಟಣ ಯೋಜನಾ ಪ್ರಾಧಿಕಾರವು ಅಮಾನಿಕೆರೆ ಗ್ರಾಮದ ಸ.ನಂ.152/1, 2, 3, 4, 151/1 ಮತ್ತು 153/2ರ ವಿನ್ಯಾಸದಲ್ಲಿ ಕಾಯ್ದಿರಿಸಿದ 799 ಚ.ಮೀ. ವಿಸ್ತೀರ್ಣದ (ಸಿ.ಎ ನಿವೇಶನದ) ಪೈಕಿ 210 ಚ.ಮೀ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್ (ರಿ), ಬೆಂಗಳೂರು ಇವರಿಗೆ ಮಂಜೂರು ಮಾಡಲು ಹಾಗೂ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣ ಪಂಚಾಯತಿಯ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ಆಸ್ತಿ ನಂ.3741, ಕ್ಷೇತ್ರ-400.63 ಚ.ಮೀಟರ್ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು ಇವರಿಗೆ 30 ವರ್ಷಗಳವರೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಗಿದೆ.