ಬಹುಮಹಡಿ ಕಟ್ಟಡಗಳಿಗೆ ಫೈರ್ ಸೆಸ್ ವಿಧಿಸಲು ಸಂಪುಟ ಒಪ್ಪಿಗೆ
ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ ಫೈರ್ ಸೆಸ್ ವಿಧಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ‘ಕರ್ನಾಟಕ ಅಗ್ನಿಶಾಮಕ ಕಾಯ್ದೆ-1964’ರ ಕಲಂ 15ಕ್ಕೆ ತಿದ್ದುಪಡಿ ತಂದು, ನಂತರ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ ಫೈರ್ ಸೆಸ್ ಅನ್ನು ವಿಧಿಸಲಾಗುವುದು. ಅದರಂತೆ, ಕರ್ನಾಟಕ ಅಗ್ನಿಶಾಮಕ (ತಿದ್ದುಪಡಿ) ವಿಧೇಯಕ-2025ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಇತರ ವಿಧೇಯಕಗಳು: 2025ನೆ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಕರ್ನಾಟಕ ಪ್ಲಾಟ್‍ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ, ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಗಳನ್ನು ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಧರಿಸಿದೆ.