ನಾಳೆ ಸಂಪುಟ ಸಭೆ : ‘ಒಳಮೀಸಲಾತಿ ವರದಿ’ ಚರ್ಚೆಗೆ ಬರುವ ಸಾಧ್ಯತೆ
ಬೆಂಗಳೂರು : ಪರಿಶಿಷ್ಟರ ಒಳಮೀಸಲಾತಿ ಸಂಬಂಧದ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ನೀಡಿರುವ ವರದಿ ಹಾಗೂ ‘ಕರ್ನಾಟಕ ರೋಹಿತ್ ವೇಮುಲಾ ವಿಧೇಯಕ-2025’ಕ್ಕೆ ಅನುಮೋದನೆ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ನಾಳೆ(ಆ.7) ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಂಪುಟ ಸಭಾಮಂದಿರದಲ್ಲಿ ಬೆಳಗ್ಗೆ 11ಗಂಟೆಯ ಸುಮಾರಿಗೆ ಸಂಪುಟ ಸಭೆ ನಡೆಯಲಿದ್ದು, ‘ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಸಂಬಂಧ ನಿಯಮಗಳನ್ನು ರೂಪಿಸುವುದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಗೆ ಬರಲಿವೆ ಎಂದು ಗೊತ್ತಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ಈಗಾಗಲೇ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಸಮೀಕ್ಷೆ ನಡೆಸಿ, ದತ್ತಾಂಶವುಳ್ಳ ಆರು ಪ್ರಮುಖ ಶಿಫಾರಸ್ಸುಗಳನ್ನು ಒಳಗೊಂಡ ಒಟ್ಟು 1,766 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಆ ವರದಿಯನ್ನು ಒಪ್ಪಿಕೊಳ್ಳುವುದು ಸೇರಿದಂತೆ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.