‘ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ’ | ಚುನಾವಣಾ ಮತದಾರರ ಪಟ್ಟಿ ಬಳಸಿಕೊಂಡು ಸಮೀಕ್ಷಾ ಕಾರ್ಯ : ಸಚಿವ ಸಂಪುಟ ನಿರ್ಧಾರ
ಬೆಂಗಳೂರು : ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆಗೆ ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿರುವಂತೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಗೂ ಮತದಾರರ ಪಟ್ಟಿ ಬಳಸಿಕೊಳ್ಳುವಂತೆ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಮಾಡಲು ತಂತ್ರಾಂಶದ ಅಭಿವೃದ್ಧಿ ಮತ್ತು ಉಸ್ತುವಾರಿಯನ್ನು ಇ-ಆಡಳಿತ ಇಲಾಖೆ ಮೂಲಕ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಹೇಳೀದರು.
ಸಮೀಕ್ಷೆಯಲ್ಲಿ ನಮೂದಿಸಲಾಗುವ 6 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆಯೋಗದ ಮೇಲುಸ್ತುವಾರಿಯಲ್ಲಿ ಅಗತ್ಯವಿರುವ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳು ಕೆಲಸ ಮಾಡಲಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ವಿಮಾ ಸೊಸೈಟಿ ಸ್ಥಾಪನೆ: ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯನ್ನು ಇಎಸ್‍ಐಸಿ ಮಾರ್ಗಸೂಚಿಗಳನ್ವಯ ‘ಸೊಸೈಟಿ ನೋಂದಣಿ ಕಾಯ್ದೆ 1860’ ಅಡಿಯಲ್ಲಿ ನೋಂದಾಯಿಸಿ ‘ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ’ ಯನ್ನಾಗಿ ರೂಪಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಇತರ ನಿರ್ಣಯಗಳು: 2021-22ನೆ ಸಾಲಿನ ಆರ್‌ಐಡಿಎಫ್ ಟ್ರಾಂಚ್-27ರಡಿ ನಬಾರ್ಡ್‍ನಿಂದ ಅನುಮೋದನೆಗೊಂಡು ನಿರ್ಮಿಸುತ್ತಿರುವ ಕೃಷಿ ಇಲಾಖೆಯ 13 ಶೀತಲ ಘಟಕಗಳ ನಿರ್ಮಾಣ ಕಾಮಗಾರಿಗಳ 171.91 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಹೊಸದಾಗಿ ಮಂಜೂರು ಮಾಡಿರುವ ವಿದ್ಯಾರ್ಥಿ ನಿಲಯಗಳಿಗೆ 40 ಕೋಟಿ ರೂ.ಗಳ ವೆಚ್ಚದಲ್ಲಿ 15 ಸಾವಿರ ಟೂ-ಟಯರ್ ಕಾಟ್‍ಗಳನ್ನು ಹಾಗೂ 10 ಕೋಟಿ ರೂ.ಗಳ ವೆಚ್ಚದಲ್ಲಿ 15 ಸಾವಿರ ಕಾಯರ್ ಮ್ಯಾಟ್ರೆಸ್‍ಗಳನ್ನು ಇ-ಪೋರ್ಟಲ್ ಮೂಲಕ ಸರಬರಾಜು ಪಡೆಯಲು ಅನುಮೋದನೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ವಿದ್ಯುತ್ ಚಾಲಿತ ನಾಲ್ಕು ಚಕ್ರಗಳ ವಾಹನವನ್ನು ಖರೀದಿಸಿ ಆಹಾರ ಕಿಯೋಸ್ಕ್ ಪ್ರಾರಂಭಿಸಲು ವಾಹನ ಒಂದಕ್ಕೆ ಗರಿಷ್ಠ 3 ಲಕ್ಷ ರೂ.ಗಳ ಸಹಾಯಧನದ ಮಿತಿಯಲ್ಲಿ ಒಂದೇ ಮಾದರಿಯ ಒಟ್ಟು 1103 ವಾಹನಗಳನ್ನು ಅಂದಾಜು 33.09 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯನ್ನು 33.78 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು 200 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿ 91.25 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಉನ್ನತೀಕರಿಸಲು ಅನುಮೋದನೆ ನೀಡಲಾಗಿದೆ.
ಅನುಕಂಪದ ನೇಮಕಾತಿ: ಕಾರ್ಕಳ ನಕ್ಸಲ್ ನಿಗ್ರಹ ದಳದಲ್ಲಿ ದ್ವಿತಿಯ ದರ್ಜೆ ಸಹಾಯಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿವಂಗತ ಪಿ.ಜಗದೀಶ್ ಅವರ ಅವಿವಾಹಿತ ಸಹೋದರಿ ತಾರಾ ಅವರಿಗೆ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳನ್ನು ಸಡಿಲಿಸಿ, ವಿಶೇಷ ಪ್ರಕರಣವೆಂದು ಪರಿಗಣಿಸಿ, ಅನುಕಂಪದ ಆಧಾರದಲ್ಲಿ ನೇಮಕಾತಿ ನೀಡಲು ಸಚಿವ ಸಂಪುಟವು ಅನುಮೋದಿಸಿದೆ.
ಬೀದರ್‍ಗೆ ಕ್ಯಾನ್ಸರ್ ಆಸ್ಪತ್ರೆ: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮೇಲ್ವಿಚಾರಣೆಯೊಂದಿಗೆ 100 ಹಾಸಿಗೆಗಳ ಸಾಮಥ್ರ್ಯದ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸುವ ಸಿವಿಲ್ ಕಾಮಗಾರಿಯ ಅಂದಾಜು ವೆಚ್ಚ 36 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಭರಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ.
ಯಲಬುರ್ಗಾ, ಜೇವರ್ಗಿ ಹಾಗೂ ಯಾದಗಿರಿಯಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜುಗಳಿಗೆ ಒಟ್ಟು 41.91 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೆಕೆಆರ್‍ಡಿಬಿ ಅನುದಾನದಲ್ಲಿ ಪ್ರಾರಂಭ ಮಾಡಲು ಅನುಮೋದನೆ ನೀಡಿದೆ.
ಹಾನಗಲ್ ತಾಲೂಕಿನ ವರದಾ ನದಿಯಿಂದ ನೆರೆಗಲ್ ಹಾಗೂ ಕುಸನೂರ ಏತ ನೀರಾವರಿ ಮುಖಾಂತರ 111 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 220 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬಾಗಲಕೋಟೆ ತಾಲೂಕಿನ ಸೊಕನಾದಗಿ ಗ್ರಾಮ ಮತ್ತು ಸುತ್ತಮುತ್ತಲಿನ 588 ಹೆಕ್ಟೇರ್ ಕ್ಷೇತ್ರಕ್ಕೆ ಏತ ನೀರಾವರಿ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ 17 ಕೋಟಿ ರೂ.ಗಳ ಮೊತ್ತದ ಕಾಮಗಾರಿಗೆ ಹಾಗೂ ರಾಜ್ಯದ 15 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 15 ಮಹಿಳಾ ಕಾಲೇಜು ಕಟ್ಟಡಗಳ ನಿರ್ಮಾಣದ 87.60 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪಾಂಡವಪುರ ಪಟ್ಟಣದ ಒಳಚರಂಡಿ ಯೋಜನೆಯಡಿ ಬಿಟ್ಟು ಹೋದ ಒಳಚರಂಡಿ ಕೊಳವೆ ಮಾರ್ಗ, ಹೊರ ಹರಿವು ಒಳಚರಂಡಿ ಮಾರ್ಗ ಮತ್ತು ಗೃಹ ಸಂಪರ್ಕ ಕಲ್ಪಿಸುವ ಬಾಕಿ ಉಳಿದ ಕಾಮಗಾರಿಗಳನ್ನು ರೂ.11.62 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಂದ ಶಿವ ಸಮತೋಲನ ಜಲಾಶಯದಿಂದ ಶಿವ ಸಮತೋಲನ ಜಲಾಶಯದ ಕೊಳವೆ ಮಾರ್ಗಗಳ ಇಂಟೇಕ್ ಬಳಿ ಇರುವ 5ನೇ ಹಂತದ ಕಚ್ಚಾ ನೀರು ಸರಬರಾಜು ಕೊಳವೆ ಮಾರ್ಗದವರೆಗೆ 3200 ಮಿ.ಮೀ ವ್ಯಾಸದ ವಿಸ್ತರಿತ ಹೆಚ್ಚುವರಿ ಕಚ್ಚಾ ನೀರಿನ ಕೊಳವೆ ಮಾರ್ಗವನ್ನು ಅಳವಡಿಸುವ 136.50 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಿದೆ.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಕಾಳಸ್ತಿಪುರ ಗ್ರಾಮದ ವಸತಿ ಬಡಾವಣೆಯಲ್ಲಿ 4017.37 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು 3,21,38,960 ರೂ.ಗಳ ಒಟ್ಟು ಮೌಲ್ಯಕ್ಕೆ ಶೇ.10 ರಷ್ಟು ದರ ವಿಧಿಸಿ ಕೋಲಾರದ ಜಿಲ್ಲಾ ಕುರುಬರ ಸಂಘಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.
ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ ರಚನೆ: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ರಚನೆ, ಆಯುಕ್ತರ ನೇಮಕಾತಿ ಹಾಗೂ ಅಧಿಕಾರ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಶಾಸನಬದ್ಧ ಅವಕಾಶವನ್ನು ಕಲ್ಪಿಸಲು ಹಾಗೂ ಆಯುಕ್ತಾಲಯ ರಚನೆಯಿಂದ ನಗರಾಭಿವೃದ್ಧಿ ಪ್ರಾಧಿಕಾರಗಳ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣವನ್ನು ಆಯುಕ್ತಾಲಯದ ವ್ಯಾಪ್ತಿಗೆ ಒಳಪಡಿಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ಕ್ಕೆ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024 ಗಳಲ್ಲಿ ತಿದ್ದುಪಡಿ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಆಣೆಕಟ್ಟು ನಾಲೆ ಮತ್ತು ವಡಕೆಕಟ್ಟೆ ಹೈಲೆವೆಲ್ ನಾಲೆಗಳ ಆಧುನೀಕರಣ ಕಾಮಗಾರಿಗಳ ಹಾಗೂ ಅಡ್ಡಮೋರಿಗಳ ಅಭಿವೃದ್ಧಿ ಕಾಮಗಾರಿಗಳ 49.85 ಕೋಟಿ ರೂ.ಗಳ ಮೊತ್ತದ ಯೋಜನೆಗೆ ಹಾಗೂ ಹಾರಂಗಿ ಬಲದಂಡೆ ನಾಲೆಯಡಿ ಬರುವ ಮರೂರು ಶಾಖಾ ನಾಲಾ ಹಾಗೂ ಅದರಡಿ ಬರುವ ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಯ 90 ಕೋಟಿ ರೂ.ಗಳ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹೇಮಾವತಿ ಎಡದಂಡೆ ಕಾಲುವೆ ಅಡಿಯಲ್ಲಿ ಡಿಸ್ಟ್ರಿಬ್ಯೂಟರಿ-64 ಮತ್ತು ಅದರ ಉಪ ಕಾಲುವೆಗಳ ಸಿಸಿ ಲೈನಿಂಗ್ ಮತ್ತು ಪುನರ್‍ನಿರ್ಮಾಣ ಕಾಮಗಾರಿಗೆ ಹಾಗೂ ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಆಣೆಕಟ್ಟಿನಿಂದ ಮಲಪ್ರಭಾ ನದಿಯ ನೀರು ಎತ್ತುವ ಮೂಲಕ ರಾಮದುರ್ಗ ತಾಲೂಕಿನ ಚಂದರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ 8 ಕೆರೆಗಳಿಗೆ ನೀರು ತುಂಬಿಸುವ 85 ಕೋಟಿ ರೂ.ಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮದ್ದೂರು ಕೆರೆ ಅಡಿಯಲ್ಲಿನ ಚಾಮನಹಳ್ಳಿ ಬೈರಾನ್ ಹಾಗೂ ವೈದ್ಯನಾಥಪುರ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು 49.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮೇಲ್ದರ್ಜೆಗೇರಿಸಲು ಅನುಮೋದನೆ: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮ ಪಂಚಾಯಿತಿಯೊಂದಿಗೆ ಬಿ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಟಿ.ಬೆಟ್ಟಹಳ್ಳಿ ಮತ್ತು ಕೂರುಬಾಳನಹುಂಡಿ ಗ್ರಾಮಗಳನ್ನು ಸೇರ್ಪಡೆಗೊಳಿಸಿ ‘ತಲಕಾಡು ಪಟ್ಟಣ ಪಂಚಾಯಿತಿ’ಯನ್ನಾಗಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆಯ ವ್ಯಾಪ್ತಿಗೆ ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆ ಮಾಡಿ ಭಟ್ಕಳ ನಗರಸಭೆಯನ್ನಾಗಿ ಹಾಗೂ ವಿಜಯಪುರ ಜಿಲ್ಲೆಯ ಇಂಡಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಮತ್ತು ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ‘ಕೈವಾರ ಪಟ್ಟಣ ಪಂಚಾಯಿತಿ’ಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ.
ವಿವಾಹಿತ ಮಗಳಿಗೂ ಅನುಕಂಪದ ಉದ್ಯೋಗ: ಕುಟುಂಬ ಸದಸ್ಯರು ಎಂಬ ವ್ಯಾಖ್ಯಾನದಲ್ಲಿ ಸಹೋದರರು, ಸಹೋದರಿಯರು, ಮೊಮ್ಮಗ, ಅವಿವಾಹಿತ ಮೊಮ್ಮಗಳು, ಸೊಸೆ ವಿಧವಾ ಮಗಳು ಮತ್ತು ವಿಧವಾ ಮೊಮ್ಮಗಳು ಎಂಬ ಪದಗಳ ನಂತರ ವಿವಾಹಿತ ಮಗಳು ಎಂಬ ಪದಗಳನ್ನು ಸೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.