ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ 11 ಶ್ರಮಿಕ ವಸತಿ ಶಾಲೆ ನಿರ್ಮಾಣ : ಸಂಪುಟ ಒಪ್ಪಿಗೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಅ.9: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 405.55 ಕೋಟಿ ರೂ.ವೆಚ್ಚದಲ್ಲಿ 11 ಶ್ರಮಿಕ ಶಾಲೆಗಳ ನಿರ್ಮಾಣ ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮೀನು ಲಭ್ಯವಿರುವ ಮತ್ತು ಭೌಗೋಳಿಕ ವ್ಯಾಪ್ತಿಯು ಹೆಚ್ಚಿರುವ ಜಿಲ್ಲೆಗಳಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು ಹೆಚ್ಚುವರಿಯಾಗಿ ಎರಡನೆ ಹಂತದಲ್ಲಿ ನಿರ್ಮಿಸಲಾಗುವುದು. ಈ ಈ ಶಾಲೆಗಳ ನಿರ್ಮಾಣಕ್ಕಾಗಿ 405.55 ಕೋಟಿ ರೂ.ಗಳ ವೆಚ್ಚವನ್ನು ಸುಂಕ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯ ಬೀಜ ನಿಗಮಕ್ಕೆ ರಸಗೊಬ್ಬರ ಕಾಪು ದಾಸ್ತಾನು ಯೋಜನೆಗೆ ದುಡಿಯುವ ಬಂಡವಾಳ 200 ಕೋಟಿ ರೂ.ಗಳ ಬ್ಯಾಂಕ್ ಸಾಲ ಸೌಲಭ್ಯಕ್ಕೆ ಪ್ರಸಕ್ತ ಸಾಲಿನ ಎ.1 ರಿಂದ 2026ರ ಮಾ.31ರವರೆಗೆ ಸರಕಾರದ ಖಾತರಿ ನೀಡಲು ಸಚಿವ ಸಂಪುಟ ಅನುಮೋದನೆ ನಿಡಿದೆ ಎಂದು ಅವರು ಹೇಳಿದರು.
ರಾಜ್ಯ ಬೀಜ ನಿಗಮಕ್ಕೆ ಶೇ.1 ರಷ್ಟು ದಲ್ಲಾಳಿ ವೆಚ್ಚಕ್ಕಾಗಿ 200 ಕೋಟಿ ರೂ., ರಾಜ್ಯ ಸಹಕಾರ ಮಾರಾಟ ಮಹಾಮಂಡಳ ರಸಗೊಬ್ಬರ ಕಾಪು ದಾಸ್ತಾನು ಯೋಜನೆಗೆ ದುಡಿಯುವ ಬಂಡವಾಳ 200 ಕೋಟಿ ರೂ.ಬ್ಯಾಂಕ್ ಸಾಲ ಸೌಲಭ್ಯಕ್ಕೆ ಎ.1 ರಿಂದ 2026ರ ಮಾ.31 ರವರೆಗೆ ಸರಕಾರದ ಖಾತರಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಜಲಾನಯನ ಅಭಿವೃದ್ಧಿ ಘಟಕ-ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ 2.0 ಯೋಜನೆಯಡಿ ಹೆಚ್ಚುವರಿಯಾಗಿ 15 ಯೋಜನೆಗಳನ್ನು ರಾಜ್ಯದ 15 ತಾಲೂಕುಗಳಲ್ಲಿ 39,413 ಹೆಕ್ಟೇರ್ ಪ್ರದೇಶದಲ್ಲಿ 90 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಘಟನೋತ್ತರ ಅನುಮೋದನೆ: ರಾಜ್ಯ ಸಿವಿಲ್ ಸೇವೆ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು 2027ರ ಡಿ.31ರವರೆಗೆ ಹೊರಡಿಸಲಾಗುವ ಎಲ್ಲ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯನ್ನು 3 ವರ್ಷಗಳಿಗೆ ಸಡಿಲಿಸಿ ಹೊರಡಿಸಲಾಗಿರುವ ಸರಕಾರದ ಆದೇಶಕ್ಕೆ ಸಚಿವ ಸಂಪುಟವು ಘಟನೋತ್ತರ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.
ರಾಜ್ಯ ದತ್ತಾಂಶ ಕೇಂದ್ರದಲ್ಲಿನ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ನವೀಕರಿಸಲು ಮತ್ತು ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶಕ್ಕಾಗಿ ವಾರ್ಷಿಕ 38.33 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹೊಸ ತಂತ್ರಾಂಶಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಅವಧಿ ವಿಸ್ತರಣೆ: ರಾಜ್ಯ ಹಣಕಾಸು ಆಯೋಗವು ಈಗಾಗಲೇ ತನ್ನ ಮೊದಲ ವರದಿಯನ್ನು ಸಲ್ಲಿಸಿದ್ದು, 2024-25ನೆ ಆರ್ಥಿಕ ಸಾಲಿಗೆ ಮಾತ್ರ ಶಿಫಾರಸ್ಸುಗಳನ್ನು ಮಾಡಿದೆ ಹಾಗೂ 2029-30ಕ್ಕೆ ಕೊನೆಗೊಳ್ಳುವ ಅವಾರ್ಡ್ ಅವಧಿಗೆ ಆಯೋಗವು ತನ್ನ ಅಂತಿಮ ವರದಿಯನ್ನು ಸಲ್ಲಿಸುವ ಅಗತ್ಯವಿದೆ. ಆದುದರಿಂದ, 5ನೆ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ಪ್ರಸಕ್ತ ಸಾಲಿನ ನವೆಂಬರ್‍ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಪುರಸ್ಕೃತ ಐಸಿಜೆಎಸ್-2.0 ಯೋಜನೆಯಡಿ ಕೇಂದ್ರ ಗೃಹ ಮಂತ್ರಾಲಯವು ಮಂಜೂರು ಮಾಡಿರುವ 89.22 ಕೋಟಿ ರೂ.ಗಳ ಮೊತ್ತದಲ್ಲಿ ಉಪಕರಣಗಳನ್ನು ಪೊಲೀಸ್ ಗಣಕ ವಿಭಾಗದ ವತಿಯಿಂದ ಖರೀದಿಸಲು ಹಾಗೂ ತರಬೇತಿ ಹಾಗೂ ಇತರೆ ಕಾರ್ಯಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪಿಆರ್‌ಎಎಂಸಿ ಅಧ್ಯಯನದಲ್ಲಿ ಗುರುತಿಸಿರುವ ಒಟ್ಟಾರೆ ಸೇತುವೆಯಲ್ಲಿ ಅತೀ ಅವಶ್ಯವಿರುವ ಬೃಹತ್ ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಗಳನ್ನು 1000 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಹಾಗೂ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸಂಪರ್ಕ ರಹಿತ ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಕಾಲುಸಂಕಗಳ ನಿರ್ಮಾಣ ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಬೀದರ್ ಜಿಲ್ಲೆಯ ಔರಾದ್ (ಬಿ) ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಅವರು ತಿಳಿಸಿದರು.
‘ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಸಬಾ ಹೋಬಳಿಯ ದೇರೆಬೈಲ್‍ನ ಬ್ಲೂಬೆರ್ರಿ ಹಿಲ್ಸ್ ರಸ್ತೆಯ ಸರ್ವೇ ಸಂಖ್ಯೆ: 129 ಮತ್ತು 113 ರಲ್ಲಿನ 3-285 ಎಕರೆ ಭೂಮಿಯನ್ನು ‘ವಾಣಿಜ್ಯ ಕಚೇರಿ ಟೆಕ್ ಪಾರ್ಕ್’ ಆಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್‍ಒಟಿ) ಆಧಾರದ ಮೇಲೆ ನಗದೀಕರಿಸಲು ಹಾಗೂ ಅಭಿವೃದ್ದಪಡಿಸಲು ಸಚಿವ ಸಂಪುಟ ನಿರ್ಣಯಿಸಿದೆ.
-ಎಚ್.ಕೆ.ಪಾಟೀಲ್, ಕಾನೂನು ಸಚಿವ