ನೆರೆ ಹಾವಳಿ |12.82 ಲಕ್ಷ ಹೆಕ್ಟೇರ್ ಬೆಳೆ ಹಾನಿಗೆ ಇನ್‍ಪುಟ್ ಸಬ್ಸಿಡಿ ನೀಡಲು ಸಂಪುಟ ನಿರ್ಧಾರ
ಎಚ್.ಕೆ.ಪಾಟೀಲ್
ಬೆಂಗಳೂರು, ಅ.16 : ನೈಋತ್ಯ ಮುಂಗಾರು ಅವಧಿಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಸಂಭವಿಸಿದ ಸುಮಾರು 12.82 ಲಕ್ಷ ಹೆಕ್ಟೇರ್‍ಗಳಷ್ಟು ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಇನ್‍ಪುಟ್ ಸಬ್ಸಿಡಿ ಅನ್ನು ಪಾವತಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‍ಡಿಆರ್‌ಎಫ್/ಎನ್‍ಡಿಆರ್‌ಎಫ್ ಮಾನದಂಡಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 8,500 ರೂ.(ಎರಡು ಹೆಕ್ಟೇರ್ ಗೆ ಸೀಮಿತ)ಗಳನ್ನು ಮುಖ್ಯಮಂತ್ರಿ ಘೋಷಿಸಿರುವಂತೆ ಪ್ರತಿ ಹೆಕ್ಟೇರ್ ಗೆ 17 ಸಾವಿರ ರೂ.(ಎರಡು ಹೆಕ್ಟೇರ್ ಗೆ ಸೀಮಿತ) ಪಾವತಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅದೇ ರೀತಿ, ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ 17 ಸಾವಿರ ರೂ.(ಎರಡು ಹೆಕ್ಟೇರ್ ಗೆ ಸೀಮಿತ)ಗಳನ್ನು 25,500 ರೂ.(ಎರಡು ಹೆಕ್ಟೇರ್ ಗೆ ಸೀಮಿತ)ಗಳಿಗೆ, ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ 22,500 ರೂ.(ಎರಡು ಹೆಕ್ಟೇರ್ ಗೆ ಸೀಮಿತ)ಗಳನ್ನು 31 ಸಾವಿರ ರೂ.(ಎರಡು ಹೆಕ್ಟೇರ್ ಗೆ ಸೀಮಿತ)ಪಾವತಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಇತರೆ ನಿರ್ಣಯಗಳು: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಗಳಂತೆ ಒಟ್ಟು 2,79,688 ಸೀರೆಗಳನ್ನು ಘಟಕ ವೆಚ್ಚ 500 ರೂ.ಗಳಂತೆ ಖರೀದಿಸಲು ಐ.ಸಿ.ಡಿ.ಎಸ್ ಯೋಜನೆಯ 2025-26ನೆ ಸಾಲಿನ ಅನುದಾನದಿಂದ 13.98 ಕೋಟಿ ರೂ.(ಕೇಂದ್ರದ ಪಾಲು 7.91 ಕೋಟಿ ರೂ. ಹಾಗೂ ರಾಜ್ಯದ ಪಾಲು 6.07 ಕೋಟಿ ರೂ.) ವೆಚ್ಚವನ್ನು ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ.
ರಾಜ್ಯದ 69922 ಅಂಗನವಾಡಿ ಕೇಂದ್ರಗಳಿಗೆ 1,500 ರೂ. ಘಟಕ ವೆಚ್ಚದಲ್ಲಿ ಔಷಧ ಕಿಟ್‍ಗಳನ್ನು ಒದಗಿಸಲು, ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿ 10.49 ಕೋಟಿ ರೂ.(ಕೇಂದ್ರದ ಪಾಲು 5.93 ಕೋಟಿ ರೂ. ಮತ್ತು ರಾಜ್ಯದ ಪಾಲು 4.56 ಕೋಟಿ ರೂ.) ವೆಚ್ಚದಲ್ಲಿ ಇ-ಟೆಂಡರ್ ಮೂಲಕ ಖರೀದಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ರಾಜ್ಯ ಗೃಹ ಮಂಡಳಿಯ ವತಿಯಿಂದ ಬೆಂಗಳೂರು ನಗರ, ಸೂರ್ಯನಗರ-4ನೆ ಹಂತ ಬಡಾವಣೆಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯಡಿ ಇಂಡ್ಲವಾಡಿ ಗ್ರಾಮದ 75 ಎಕರೆ ವಿಸ್ರ್ತಿರ್ಣದ ಜಮೀನಿನಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಮತ್ತು ಸಂಕೀರ್ಣದ ಯೋಜನೆಯನ್ನು 2350 ಕೋಟಿ ರೂ.ಗಳಿಗೆ ಅನುಷ್ಠಾನಗೊಳಿಸುವ ಸಂಬಂಧ ತಾತ್ವಿಕ ಅನುಮೋದನೆ ನೀಡಲಾಗಿದೆ ಮತ್ತು ವಿಸ್ತೃವಾದ ಯೋಜನಾ ವರದಿಯ ನಂತರ ತೀರ್ಮಾನ ಕೈಗೊಳ್ಳಲು ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸಲು ತಿಳಿಸಲಾಗಿದೆ.
ವಿಜಯಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ 100 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಲು ಅವಶ್ಯವಿರುವ ಉಪಕರಣಗಳನ್ನು 54.92 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು, ಮೈಸೂರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳನ್ನು ತಲಾ 100 ಕೋಟಿ ರೂ.ಗಳ ಅನುದಾನದಲ್ಲಿ ಆರಂಭಿಸಲು, ಕಲಬುರಗಿ ಜಿಲ್ಲೆಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಸಂಜಯ್ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ನೂತನ ರಕ್ತನಾಳ ಸಂಬಂಧಿತ(ವಾಸ್ಕ್ಯುಲರ್) ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಹಾಗೂ ಮುಖ್ಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಅವಶ್ಯವಿರುವ ಉಪಕರಣಗಳನ್ನು 26.09 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ವೃಷಭಾವತಿ ವ್ಯಾಲಿ ಸಂಸ್ಕರಣಾ ಘಟಕದ ಮರುಬಳಕೆ ನೀರನ್ನು ಗೋಪಾಲಪುರ ಕೆರೆಯಿಂದ (ಯೋಜನೆಯ ಲಿಫ್ಟ್-4) ಎರಡನೆ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ 650 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 1200 ಚ.ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಲಾಗಿರುವ ನೆಲ ಮಹಡಿಯೊಂದಿಗೆ 2 ಅಂತಸ್ತುವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
-ಎಚ್.ಕೆ.ಪಾಟೀಲ್, ಕಾನೂನು ಸಚಿವ