ಮೂಲಸೌಕರ್ಯಗಳ ಪುನರ್ ನಿರ್ಮಾಣ | ಎನ್‍ಡಿಆರ್‌ಎಫ್ ಅಡಿಯಲ್ಲಿ 1545.23 ಕೋಟಿ ರೂ.ಗಳ ಆರ್ಥಿಕ ಸಹಾಯ ಕೋರಿ ಕೇಂದ್ರಕ್ಕೆ ಮನವಿ : ಸಚಿವ ಸಂಪುಟ ನಿರ್ಧಾರ
"2,200 ಶಾಲಾ ಕೊಠಡಿಗಳ ನಿರ್ಮಾಣ"
ಬೆಂಗಳೂರು : ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಅವಧಿಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್ ನಿರ್ಮಾಣವನ್ನು ಕೈಗೊಳ್ಳಲು ಎನ್‍ಡಿಆರ್‌ಎಫ್ ಅಡಿಯಲ್ಲಿ 1545.23ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಕೋರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೇಂದ್ರ ಸರಕಾರವು ಮಹಾರಾಷ್ಟ್ರ ಸೇರಿದಂತೆ ಇನ್ನಿತರೆ ರಾಜ್ಯಗಳಿಗೆ ಮೂಲಸೌಕರ್ಯಗಳ ಪುನರ್ ನಿರ್ಮಾಣಕ್ಕಾಗಿ ಎನ್‍ಡಿಆರ್‌ಎಫ್ ಅಡಿಯಲ್ಲಿ ನೆರವು ನೀಡಿದೆ. ಇದೇ ಮೊದಲ ಬಾರಿಗೆ ನಮ್ಮ ರಾಜ್ಯವು ಮೂಲಸೌಕರ್ಯಗಳ ಪುನರ್ ನಿರ್ಮಾಣಕ್ಕಾಗಿ ನೆರವು ಯಾಚಿಸಿ ಮನವಿ ಸಲ್ಲಿಸಲಿದೆ. ನಮ್ಮ ಅಂದಾಜಿನ ಪ್ರಕಾರ ಸುಮಾರು 5 ಸಾವಿರ ಕೋಟಿ ರೂ.ಗಳ ನಷ್ಟವಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಆಗಿರುವ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಈಗಾಗಲೆ ಐದು ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ಆಗಿದೆ. 2-3 ದಿನಗಳಲ್ಲಿ ರೈತರಿಗೆ ಪರಿಹಾರ ತಲುಪಿಸುವ ಕೆಲಸ ಆಗಲಿದೆ. ರಾಜ್ಯ ಸರಕಾರದ ಖಜಾನೆಯಿಂದಲೆ ಪರಿಹಾರವನ್ನು ವಿತರಿಸಲಾಗುವುದು ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.
ಕೆ-ಶೋರ್ ಯೋಜನೆ: ರಾಜ್ಯದ ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಪರಿಸರ ಪುನಃ ಸ್ಥಾಪನೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಜೀವನೋಪಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕೆ-ಶೋರ್ ಯೋಜನೆಯಡಿ ತಾಂತ್ರಿಕ ಮತ್ತು ನಿರ್ವಹಣೆ ಸೇವೆಗಳನ್ನು 20.47 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪಡೆಯಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
2,200 ಶಾಲಾ ಕೊಠಡಿಗಳ ನಿರ್ಮಾಣ: ರಾಜ್ಯದ ವಿವಿಧ ಸರಕಾರಿ ಶಾಲೆಗಳಲ್ಲಿ 2200 ಶಾಲಾ ಕೊಠಡಿಗಳನ್ನು 360.01 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಇತರ ನಿರ್ಣಯಗಳು: ಕೋಲಾರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕೋಲಾರ ಎಪಿಎಂಸಿಯಿಂದ ಹಾಗೂ ಗ್ರೇಟರ್ ಬೆಂಗಳೂರು ವ್ಯಾಪ್ತಿಯಿಂದ ಪ್ರತಿದಿನ ಒಟ್ಟಾರೆ 150 ಟನ್‍ಗಳಷ್ಟು ಹಸಿತ್ಯಾಜ್ಯವನ್ನು ಕಂಪೋಸ್ಡ್ ಬಯೋ ಗ್ಯಾಸ್(ಸಿಬಿಜಿ) ಘಟಕಗಳ ಮೂಲಕ ಸಂಸ್ಕರಿಸಲು ಕೋಲಾರ ನಗರ ಸಭೆಗೆ ಸೇರಿದ ವಕ್ಕಲೇರಿ ಹೋಬಳಿಯ ಅರಾಭಿಕೊತ್ತನೂರು ಗ್ರಾಮದಲ್ಲಿ 9 ಎಕರೆ 38 ಗುಂಟೆ ಜಮೀನನ್ನು ಕೇವಲ ಸೀಮಿತ ಬಳಕೆಗಾಗಿ ಮಾತ್ರ 25 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭಾರತೀಯ ಅನಿಲ ಪ್ರಾಧಿಕಾರ(ಗೇಲ್)ಕ್ಕೆ ವಹಿಸಿಕೊಡಲು ನಿರ್ಧಾರ.
ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆ ವ್ಯಾಪ್ತಿಯ ಐಡಿಎಸ್‍ಎಂಟಿ ಬಡಾವಣೆಯಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ 300.14 ಚ.ಮೀ. ಅಳತೆಯ ನಿವೇಶನವನ್ನು ಶಹಾಪೂರದ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಕನಕ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಲು ತೀರ್ಮಾನ.
ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ ಫಾರ್ಮ್‍ನಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಥಮಿಕ ಹಂತಕ್ಕಾಗಿ 23.25 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹೊಸ ಮೂಲಸೌಕರ್ಯ ಅಭಿವೃದ್ಧಿ, ದುರಸ್ತಿ ಮತ್ತು ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಕಾರವಾರ ವೈದ್ಯಕೀಯ ಕಾಲೇಜು ಆವರಣದಲ್ಲಿ ಕ್ಯಾನ್ಸರ್ ಕೇರ್ ಘಟಕದ ಸ್ಥಾಪನೆಗೆ ಅಗತ್ಯವಿರುವ ಉಪಕರಣಗಳ ಖರೀದಿ ಮತ್ತು ನಿರ್ಮಾಣ ಕಾಮಗಾರಿಗಳನ್ನು ಒಟ್ಟು 31.63 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಕರ್ನಾಟಕ ನವೋದ್ಯಮ ನೀತಿ 2025-27ರ ಅಡಿಯಲ್ಲಿ ಐದು ವರ್ಷಗಳ ಅವಧಿಗೆ 80 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಎಂಟು ಟೆಕ್ನಾಲಜಿ ಬ್ಯುಸಿನೆಸ್ ಇನ್‍ಕ್ಯೂಬೇಟರ್ಸ್ 2.0ಗಳನ್ನು ಸ್ಥಾಪನೆ. ರಾಜ್ಯ ಮೀಸಲು ಪೊಲೀಸ್(ಕೆಎಸ್‍ಆರ್‍ಪಿ) ಮತ್ತು ಭಾರತೀಯ ಮೀಸಲು ಪಡೆಯ(ಐಆರ್‍ಬಿ) ಘಟಕಗಳಿಗೆ ನೇಮಕಾತಿಯಾಗಲು ಇದ್ದ ಕನಿಷ್ಠ ವಿದ್ಯಾರ್ಹತೆಯನ್ನು ಎಸೆಸೆಲ್ಸಿಯಿಂದ ಪಿಯುಸಿಗೆ ನಿಗದಿಗೊಳಿಸಲು ನಿರ್ಧಾರ.
2025-26ನೆ ಸಾಲಿನ ಬಜೆಟ್ ಘೋಷಣೆಯಂತೆ ತಂತ್ರಾಂಶ ಅಭಿವೃದ್ಧಿ, ವರ್ಧನೆ, ನಿರ್ವಹಣೆ ಹಾಗೂ ತಾಂತ್ರಿಕ ಸಹಾಯಕ್ಕಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ‘ಕಾವೇರಿ ಐಟಿ ಸೆಲ್’ ಹೆಸರಿನ ಇನ್-ಹೌಸ್ ತಾಂತ್ರಿಕ ಅಭಿವೃದ್ಧಿ ವಿಭಾಗವನ್ನು ಮಾನವ ಸಂಪನ್ಮೂಲ ಸಂಸ್ಥೆಯಿಂದ ಹೊರಗುತ್ತಿಗೆಯ ಮೂಲಕ 5 ವರ್ಷದ ಅವಧಿಗೆ 69.13 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲು ಮತ್ತು ಪಂಪ್ ಸೆಟ್‍ಗಳನ್ನು ಸರಬರಾಜು ಮಾಡಲು 2022-23ನೆ ಸಾಲಿನಲ್ಲಿ ಪಟ್ಟಿ ಮಾಡಿಕೊಂಡಿರುವ ಗುತ್ತಿಗೆದಾರರ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ ಸೀಮಿತಗೊಳಿಸಿ ವಿಸ್ತರಿಸಲು ಆಡಳಿತಾತ್ಮಕ ಅನುಮೋದನೆ.
ಅಲ್ಲದೆ, ಗಂಗಾಕಲ್ಯಾಣ ಯೋಜನೆ ಮತ್ತು ಇತರ ಸ್ವಯಂ ಉದ್ಯೋಗ ಯೋಜನೆಗಳಡಿ ಫಲಾನುಭವಿಗಳನ್ನು ಆಯಾ ವರ್ಷದ ಅ.31ನೆ ತಾರೀಖಿನೊಳಗೆ ಸಂಬಂಧಪಟ್ಟ ಕ್ಷೇತ್ರದ ಶಾಸಕರು ಆಯ್ಕೆ ಮಾಡದೆ ಇದ್ದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೊಣೆಗಾರಿಕೆ ವಹಿಸಲು ನಿರ್ಣಯ.
2025-26ನೆ ಸಾಲಿನಲ್ಲಿ ಪೊಲೀಸ್ ಇಲಾಖೆಗೆ 241 ವಿವಿಧ ಮಾದರಿಯ ವಾಹನಗಳನ್ನು 34.95 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
‘ರಾಜ್ಯದ ಕರಾವಳಿಯಲ್ಲಿರುವ ನಾಲ್ಕು ಬಂದರುಗಳಾದ ಕಾರವಾರ, ಹಳೆ ಮಂಗಳೂರು(ಬೇಂಗ್ರೆ ಬದಿ), ಹಳೆ ಮಂಗಳೂರು(ನಗರ ಬದಿ) ಮತ್ತು ಮಲ್ಪೆಯ ಬರ್ತ್‍ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ದುರಸ್ತಿ, ಕಾರ್ಯಾಚರಣೆ, ನಿರ್ವಹಣೆ, ವರ್ಗಾವಣೆ ಆಧಾರದ ಮೇಲೆ ಒಟ್ಟು 40.12 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಖಾಸಗಿ ಪಾಲುದಾರರಿಗೆ ವಹಿಸಲು ಸಚಿವ ಸಂಪುಟ ನಿರ್ಧರಿಸಿದೆ’
-ಎಚ್.ಕೆ.ಪಾಟೀಲ್, ಕಾನೂನು ಸಚಿವ
ಮಂಡ್ಯ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡದ ನಿರ್ಮಾಣ ಮಾಡಲು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ವಿವೇಕಾನಂದ ಬಡಾವಣೆಯಲ್ಲಿರುವ 14.57.8 ಚ.ಮೀ. ವಿಸ್ತೀರ್ಣದಲ್ಲಿರುವ ನಾಗರಿಕ ಸೌಲಭ್ಯ ನಿವೇಶನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮದಲ್ಲಿರುವ 8 ಗುಂಟೆ ಜಮೀನು, ಉಡುಪಿ ತಾಲೂಕಿನ ಅಂಜಾರು ಗ್ರಾಮದಲ್ಲಿ 20 ಸೆಂಟ್ಸ್ ವಿಸ್ತೀರ್ಣದ ಜಮೀನು, ಕುಂದಾಪುರ ತಾಲೂಕಿನಲ್ಲಿ 11 ಸೆಂಟ್ಸ್ ವಿಸ್ತೀರ್ಣದ ಸರಕಾರಿ ಪೊರಂಬೋಕು ವರ್ಗೀಕರಣದ ಜಮೀನನ್ನು ಕಾಂಗ್ರೆಸ್ ಭವನ ಕಟ್ಟಡ ನಿರ್ಮಿಸಲು ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿಗೆ ಮಾರ್ಗದರ್ಶಿ ಮೌಲ್ಯದ ಶೇ.5ರಷ್ಟು ನಿಗದಿ ಮಾಡಿ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.