‘ಕರ್ನಾಟಕ ನವೋದ್ಯಮ ನೀತಿ 2025-2030ʼಕ್ಕೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು : ಐದು ವರ್ಷಗಳ ಅವಧಿಯಲ್ಲಿ 518.27 ಕೋಟಿ ರೂ.ಗಳ ಒಟ್ಟಾರೆ ಆಯವ್ಯಯದಲ್ಲಿ ಕರ್ನಾಟಕ ನವೋದ್ಯಮ ನೀತಿ,2025-2030 ಅನ್ನು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ರಾಜ್ಯವನ್ನು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಇರಿಸುವಲ್ಲಿ, ನವೋದ್ಯಮಗಳನ್ನು ಅವರ ಜೀವನ ಚಕ್ರದಾದ್ಯಂತ ಪೋಷಿಸಲು ಮತ್ತು ಸುಸ್ಥಿರ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸಲು ಅಗತ್ಯವಿರುವ ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಮೂಲಸೌಕರ್ಯವನ್ನು ಒದಗಿಸಲು ಚೈತನ್ಯಶೀಲ ಮತ್ತು ಬೆಂಬಲಿತ ಪರಿಸರ ವ್ಯವಸ್ಥೆಯನ್ನು ಬೆಳೆಸುವಲ್ಲಿ ಈ ನೀತಿಯು ಪ್ರಮುಖ ಪಾತ್ರ ವಹಿಸುವ ಗುರಿಯನ್ನು ಹೊಂದಿದೆ ಎಂದು ಅವರು ವಿವರಿಸಿದರು.
ಈ ನೀತಿಯ ಮೂಲಕ ಕರ್ನಾಟಕವು 25 ಸಾವಿರ ಹೆಚ್ಚುವರಿ ನವೋದ್ಯಮಗಳನ್ನು ಸ್ಥಾಪಿಸಲು ಮತ್ತು ಅದರಲ್ಲಿ 10 ಸಾವಿರ ನವೋದ್ಯಮಗಳು ಬೆಂಗಳೂರಿನಿಂದ ಆಚೆಗಿನ ಕ್ಲಸ್ಟರ್‍ಗಳಿಂದ ಹೊರಹೊಮ್ಮುತ್ತವೆ ಎಂದು ಎಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಯೊಂದು ಪೊಲೀಸ್ ಠಾಣೆಯು ಬಂಧನಕ್ಕೊಳಗಾಗುವ ವ್ಯಕ್ತಿಗಳ ಮಾಹಿತಿಯನ್ನು ಒಂದು ನಿಗದಿತ ನಮೂನೆಯಲ್ಲಿ ಒಳಗೊಂಡ ದಾಖಲೆಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲು ರೂಪಿಸಿರುವ ನಿಯಮಗಳು, 2025ನೆ ಸಾಲಿನ ಕರ್ನಾಟಕ ಮಾಹಿತಿ ನಿಯಮಗಳ ರೂಪ ಮತ್ತು ವಿಧಾನ, ಕರ್ನಾಟಕ ಪೊಲೀಸ್ ಅಧಿಕಾರಿಗಳಿಂದ ಅಂತಿಮ ನಮೂನೆ ಸಲ್ಲಿಕೆ ನಿಯಮಗಳಿಗೆ ಅನುಮೋದನೆ ನೀಡಲಾಗಿದೆ ನೀಡಲಾಗಿದೆ ಎಂದು ಅವರು ಹೇಳಿದರು.
ಬೆಳಗಾವಿ ಅಧಿವೇಶನ ದಿನಾಂಕ ನಿಗದಿ ಸಿಎಂ ಹೆಗಲಿಗೆ: ‘ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ದಿನಾಂಕವನ್ನು ನಿಗದಿ ಮಾಡುವ ಅಧಿಕಾರವನ್ನು ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿದ್ದು, ಅವರೇ ಅಧಿವೇಶನದ ದಿನಾಂಕ ನಿಗದಿ ಮಾಡಲಿದ್ದಾರೆ’
-ಎಚ್.ಕೆ.ಪಾಟೀಲ್, ಕಾನೂನು ಸಚಿವ