×
Ad

ಸಚಿವ ಸಂಪುಟ ಸಭೆ | ದೇವನಹಳ್ಳಿ ರೈತರ ಹೋರಾಟಕ್ಕೆ ಮಣಿದ ಸರಕಾರ: 1777 ಎಕರೆ ಭೂ ಸ್ವಾಧೀನ ಕೈ ಬಿಡಲು ನಿರ್ಧಾರ

Update: 2025-12-04 19:08 IST

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರೈತರ ನಿರಂತರ ಹೋರಾಟಕ್ಕೆ ಮಣಿದಿದ್ದ ರಾಜ್ಯ ಸರಕಾರವು ಕೊಟ್ಟ ಮಾತಿನಂತೆ, ಇಲ್ಲಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು.

ದೇವನಹಳ್ಳಿ ವಿಶೇಷ ಆರ್ಥಿಕ ವಲಯಕ್ಕಾಗಿ 1777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಣಯಿಸಲಾಗಿತ್ತು. ಆದರೆ, ರೈತರ ಪ್ರತಿಭಟನೆ ಹಾಗೂ ಸರಕಾರದ ಜೊತೆಗಿನ ಅವರ ಸಮಾಲೋಚನೆ, ಬೇಡಿಕೆಗಳ ಹಿನ್ನೆಲೆಯಲ್ಲಿ 1777 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಕುರಿತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯಿದೆ ಕಲಂ 4ರಡಿಯಲ್ಲಿ ಅಧಿಸೂಚನೆ ಹೊರಡಿಸಿದ್ದನ್ನು ಕೈ ಬಿಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಅವರು ಹೇಳಿದರು.

ಹಿನ್ನಲೆ:

2022ರಲ್ಲಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಸ್ಥಳೀಯ ರೈತರು 2022ರ ಎಪ್ರಿಲ್ 4ರಿಂದ 1198 ದಿನಗಳ ಕಾಲ ನಿರಂತರ ಧರಣಿ ನಡೆಸಿದರು.

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ರೈತರ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವುದಾಗಿ ಭರವಸೆ ನೀಡಿದ್ದರು. ಆದರೂ, 2025ರ ಎಪ್ರಿಲ್‍ನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಹೊರಡಿಸಲಾಯಿತು.

ರೈತರು ಪುನಃ ಧರಣಿಯನ್ನು ಆರಂಭಿಸಿದರು. ಜೂ.24ರಂದು 13 ಗ್ರಾಮಗಳ ಪೈಕಿ 3 ಗ್ರಾಮಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವುದಾಗಿ ಸರಕಾರ ಮುಂದಿಟ್ಟ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದರು. ಅಲ್ಲದೆ, ಜೂ.25ರಂದು ರೈತರ ಹೋರಾಟವನ್ನು ಬೆಂಬಲಿಸಿ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡು ‘ದೇವನಹಳ್ಳಿ ಚಲೋ’ ಬೃಹತ್ ಪ್ರತಿಭಟನಾ ಜಾಥವು ಹಮ್ಮಿಕೊಂಡಿದ್ದವು. ಅಲ್ಲದೇ, ಜೂ.27ರಂದು ನಗರದ ಸ್ವಾತಂತ್ರ್ಯ ಉದ್ಯಾನಕ್ಕೆ ಪ್ರತಿಭಟನಾ ಧರಣಿ ಸ್ಥಳಾಂತರಗೊಂಡಿತು.

ಮಾತುಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ: ಜು.4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರೊಂದಿಗೆ ಸಮಾಲೋಚನೆ ನಡೆಸಿ, 10 ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಅದರಂತೆ, ಜು.15ರಂದು ಮುಖ್ಯಮಂತ್ರಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವುದಾಗಿ ಪ್ರಕಟಿಸಿದ್ದರು. ಇಂದು ಸಂಪುಟದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಥ್ಯಾಂಕ್ಯೂ ಸಿದ್ದರಾಮಯ್ಯ :

ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ದೇವನಹಳ್ಳಿ ರೈತರ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿರುವುದು ಬಹಳ ಸಂತೋಷದ ವಿಷಯ. ಇದು ರೈತರ ಗೆಲುವು. ಎದ್ದೇಳು ಕರ್ನಾಟಕ, ಸಂಯುಕ್ತ ಹೋರಾಟ ಕರ್ನಾಟಕ ಸೇರಿದಂತೆ ಅನೇಕ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡಿದ ಫಲ ಇದು. ಥ್ಯಾಂಕ್ಯೂ ಸಿದ್ದರಾಮಯ್ಯ.

ಪ್ರಕಾಶ್ ರಾಜ್, ನಟ

ಸಚಿವ ಸಂಪುಟಕ್ಕೆ ಧನ್ಯವಾದಗಳು

ಎಷ್ಟೇ ಅಡೆತಡೆ ಎದುರಾದರೂ, ಸರಕಾರ ಅಂತಿಮ ನೋಟೀಸ್ ಜಾರಿ ಮಾಡಿದರೂ ಮಣಿಯದೆ ಹಳ್ಳಿಗಳನ್ನು ಹಾಗೂ ಕೃಷಿಯನ್ನು ಸಂರಕ್ಷಿಸಿಕೊಳ್ಳಲು ಚನ್ನರಾಯಪ್ಟಣದ ಜನ ನಡೆಸಿದ ಹೋರಾಟ ದೇಶಕ್ಕೆ ಮಾದರಿಯಾಗಿದೆ. ಈ ಹೋರಾಟವನ್ನು ರಾಜ್ಯ ಹಾಗೂ ದೇಶ ಮಟ್ಟದ ಹೋರಾಟವನ್ನಾಗಿ ಪರಿವರ್ತಿಸಿ, ದಿಟ್ಟ ನಡೆಗಳ ಮೂಲಕ ಸರಕಾರ ತನ್ನ ನಿಲುವನ್ನು ಬದಲಾಯಿಸಲೇಬೇಕಾದ ವಾತಾವರಣ ನಿರ್ಮಾಣ ಮಾಡುವುದರಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಮಹತ್ವದ ಪಾತ್ರ ನಿರ್ವಹಿಸಿದೆ.

ಈ ಹೋರಾಟಕ್ಕೆ ನಟ ಪ್ರಕಾಶ್ ರಾಜ್ ರಿಂದ ಹಿಡಿದು ರಾಜ್ಯದ ಎಲ್ಲ ನಾಗರಿಕರು ಅಭೂತಪೂರ್ವ ಬೆಂಬಲ ನೀಡಿ ಈ ಸಾಧನೆ ಆಗುವಂತೆ ಮಾಡಿದ್ದಾರೆ. ತಡವಾಗಿಯಾದರೂ ಸರಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟವನ್ನು ಒಪ್ಪಿಸಿ ರೈತರ ಆಶೋತ್ತರಗಳಿಗೆ ಹಾಗೂ ಜನ ಹೋರಾಟಕ್ಕೆ ಮನ್ನಣೆ ನೀಡಿ, ಭೂಸ್ವಾಧೀನವನ್ನು ಕೈ ಬಿಡುವ ತೀರ್ಮಾನವನ್ನು ಜು.15 ರಂದು ನಡೆದ ಮಾತುಕತೆಯ ಸಂದರ್ಭದಲ್ಲಿ ಘೋಷಿಸಿದ್ದರು.

ಸಂಯುಕ್ತ ಹೋರಾಟದ ಕೋರ್ ಕಮಿಟಿ ಸದಸ್ಯರು ಎಡಬಿಡದೆ ಪ್ರಯತ್ನಗಳನ್ನು ಮಾಡಿದ್ದರ ಪರಿಣಾಮವಾಗಿ ಇಂದು ಸಚಿವ ಸಂಪುಟ ಅಂತಿಮ ತೀರ್ಮಾನ ತೆಗೆದುಕೊಂಡಿದೆ. ಈ ಹೋರಾಟದ ಭಾಗವಾದ ಎಲ್ಲರಿಗೂ ಅಭಿನಂದನೆ. ಸಚಿವ ಸಂಪುಟಕ್ಕೂ ಧನ್ಯವಾದಗಳು. ಇದೇ ರೀತಿ ಬಿಡದಿ ಹಾಗೂ ಆನೇಕಲ್ ಪ್ರದೇಶದ ಭೂ ಸ್ವಾಧೀನಗಳನ್ನೂ ಕೈ ಬಿಡಬೇಕೆಂದು ಒತ್ತಾಯಿಸುತ್ತದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಪ್ರಕಟಣೆ ತಿಳಿಸಿದೆ.

ಸರಕಾರದ ತೀರ್ಮಾನವನ್ನು ಸ್ವಾಗತಿಸುತ್ತೇವೆ ಮತ್ತು ಅಭಿನಂದಿಸುತ್ತೇವೆ. ಇದು ರೈತರ ನ್ಯಾಯಯುತ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಸುದೀರ್ಘವಾಗಿ ಹೋರಾಟ ಮಾಡಿದ ಎಲ್ಲ ರೈತರಿಗೂ, ರೈತರ ಪರ ನಿಂತ ನಾಗರಿಕ ಸಮಾಜಕ್ಕೂ, ಹೋರಾಟವನ್ನು ತಾರ್ಕಿಕ ಅತ್ಯಂಕ್ಕೆ ತೆಗೆದುಕೊಂಡು ಹೋಗಲು ಸಹಕರಿಸಿದ ಮಾಧ್ಯಮ ಸ್ನೇಹಿತರಿಗೂ, ಕಲಾವಿದರಿಗೂ ತುಂಬು ಹೃದಯ ಧನ್ಯವಾದಗಳು. ದೇವನಹಳ್ಳಿ ರೈತರ ಹೋರಾಟ ದೇಶಕ್ಕೆ ಮಾದರಿಯಾಗಲಿ. ನೊಂದವರ ಪರವಾಗಿ ಹೋರಾಟಗಳು ಮತ್ತಷ್ಟು ವಿಸ್ತರಿಸಲಿ.

- ಕಾರಳ್ಳಿ ಶ್ರೀನಿವಾಸ್, ಪದಾಧಿಕಾರಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News