ಜು.2ರಂದು ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Update: 2025-06-20 19:41 IST
ಬೆಂಗಳೂರು : ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಬೆಟ್ಟದ ಮಯೂರ ಸಭಾಂಗಣದಲ್ಲಿ ಜು.2ರ ಮಧ್ಯಾಹ್ನ 12 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆಯನ್ನು ನಡೆಸಲು ಸರಕಾರ ನಿರ್ಧರಿಸಿದೆ.
ಈ ಹಿಂದೆ ನಿಗದಿಪಡಿಸಿದಂತೆ ಜೂ.19ರಂದು ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕಿತ್ತು. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳಿಂದ ಪ್ರಸ್ತಾವನೆಗಳು ಬರುವುದು ವಿಳಂಬವಾಗಿದ್ದರಿಂದ ಸಚಿವ ಸಂಪುಟ ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು.
ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ನಂದಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಕಟ್ಟಡಗಳ ನವೀಕರಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯುತ್ತಿದೆ. ಸಚಿವ ಸಂಪುಟ ಸಭೆ ನಡೆಯುವ ಜಾಗದಲ್ಲಿ ಸಭಾ ವೇದಿಕೆ, ಪತ್ರಿಕಾಗೋಷ್ಠಿ ನಡೆಸಲು ವ್ಯವಸ್ಥೆಯನ್ನೂ ಮಾಡಲಾಗಿದೆ.