×
Ad

ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಲಂಚ ಪಡೆದ ಪ್ರಕರಣ: ಪ್ರಸೂತಿ ತಜ್ಞ ಅಮಾನತು

Update: 2023-07-21 10:09 IST

ಬೆಂಗಳೂರು: ಯಲಹಂಕ ಆಸ್ಪತ್ರೆಯಲ್ಲಿ ಹೆರಿಗೆಗೆ ವಾರ್ಡ್ ಬಾಯ್ ಮೂಲಕ ಲಂಚ ಪಡೆದಿದ್ದ ಆರೋಪದ ಮೇಲೆ ಪ್ರಸೂತಿ ತಜ್ಞ ಡಾ. ರಾಮಚಂದ್ರ ಕೆ.ಸಿ ಅವರನ್ನ ಅಮಾನತು ಮಾಡಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಆದೇಶ ಹೊರಡಿಸಿದ್ದಾರೆ.

ಯಲಹಂಕ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸಲು 10 ಸಾವಿರ ಹಣ ಪಡೆದಿರುವುದು ಲೋಕಾಯುಕ್ತರ ತನಿಖೆಯಲ್ಲಿ ಸಾಬೀತಾಗಿತ್ತು. ಈ ಕುರಿತಂತ ಪ್ರಮುಖ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದವು.

ಮಾಧ್ಯಮಗಳ ವರದಿ ಹಾಗೂ ಲೋಕಾಯುಕ್ತರ ತನಿಖೆ ಆಧಾರವಾಗಿಟ್ಟುಕೊಂಡು ವೈದ್ಯರ ವಿರುದ್ಧ ಕ್ರಮ ಜರುಗಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಯುಕ್ತರಿಗೆ ಸೂಚನೆ ನೀಡಿದ್ದರು. ಇದೊಂದು ಗಂಭೀರ ಪ್ರಕರಣವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿ ಬಡವರಿಂದ ಹಣ ವಸೂಲಿ ಮಾಡುವವರನ್ನ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಈ ರೀತಿಯ ಯಾವುದೇ ಪ್ರಕರಣ ಕಂಡುಬಂದರೂ, ತಕ್ಷಣ ಕ್ರಮ ಜರುಗಿಸಲು ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿನೆ ನೀಡಿದ್ದರು.

ಪ್ರಕರಣದ ಗಂಭೀರತೆಯನ್ನ ಅರಿತ ಆಯುಕ್ತರು ಲಂಚ ಪಡೆದ ಆರೋಪದ ಮೇಲೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ ರಾಮಚಂದ್ರ ಕೆ.ಸಿ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಮಂಜುಳಾ ಎಂಬ 20 ವರ್ಷದ ಮಹಿಳೆಗೆ ಸಿಸೇರಿಯನ್ ಮಾಡಲು ರೂ.15,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಜುಳಾ ಅವರ ಪತಿ ಅಂಗಪ್ಪ ಅವರು, ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದ್ದರು.

ಸಿಸೇರಿಯನ್ ಮುಗಿದು ಹೆಣ್ಣು ಮಗು ಜನಿಸಿದ ನಂತರ ಅಂಗಪ್ಪ ಅವರು, 10,000 ಹಣವನ್ನು ಆಸ್ಪತ್ರೆಯ ವಾರ್ಡ್ ಬಾಯ್ ವಾಹಿದ್ ಎಂಬುವವರಿಗೆ ನೀಡಿದ್ದರು. ವೈದ್ಯ ರಾಮಚಂದ್ರ ಕೆ.ಸಿ ಸೂಚನೆ ಮೇರೆಗೆ ಹಣ ಪಡೆದಿರುವುದಾಗಿ ವಾರ್ಡ್ ಬಾಯ್ ಲೋಕಾಯುಕ್ತರ ತನಿಖೆಯಲ್ಲಿ ಹೇಳಿಕೆ ನೀಡಿದ್ದರು. ಲೋಕಾಯುಕ್ತ ಪೊಲೀಸರು ಪರಿಶೀಲನೆಗೆ ತೆರಳಿದಾಗ ಲಂಚ ಪಡೆದುಕೊಂಡಿರುವ ಆರೋಪ ಸಾಬೀತಾಗಿರುತ್ತದೆ. ವೈದ್ಯರ ವಿರುದ್ಧ ಸು-ಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ವೈದ್ಯರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.‌

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News