×
Ad

ಅಕ್ರಮ ಗಣಿಗಾರಿಕೆ | ಸಿಬಿಐ ನಿರಾಕರಿಸಿದ ಪ್ರಕರಣಗಳು ಎಸ್‍ಐಟಿ ತನಿಖೆಗೆ : ಎಚ್.ಕೆ.ಪಾಟೀಲ್

Update: 2024-11-14 18:52 IST
ಎಚ್‌ಕೆ ಪಾಟೀಲ್‌ 

ಬೆಂಗಳೂರು : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 9 ಪ್ರಕರಣಗಳ ಪೈಕಿ 6 ಪ್ರಕರಣಗಳಲ್ಲಿ ತನ್ನಿಂದ ತನಿಖೆ ಸಾಧ್ಯವಿಲ್ಲ ಸಿಬಿಐ ತಿಳಿಸಿದೆ. ಆದುದರಿಂದ, ಆ 6 ಪ್ರಕರಣಗಳನ್ನು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ ವಹಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದು ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ, ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಸಿ.ಬಿ.ಐ ವಾಪಸ್ಸು ಕಳುಹಿಸಿದೆ ಎಂದರು.

ಈ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ. ಅಲ್ಲದೇ, ಅಕ್ರಮ ಗಣಿಗಾರಿಕೆಯ ಎಲ್ಲ ಪ್ರಕರಣಗಳನ್ನು ಸೂಕ್ತವಾದ ತನಿಖೆಗೆ ಒಳಪಡಿಸುವುದು ಅಗತ್ಯವಾಗಿದೆ. ಆದುದರಿಂದ, ಮುಂದಿನ ಸಚಿವ ಸಂಪುಟ ಸಭೆಗೆ ಈ ಪ್ರಕರಣಗಳ ತನಿಖೆ ಕುರಿತ ವಿವರಗಳನ್ನು ಮಂಡಿಸಬೇಕೆಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಆ ಸಭೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಅಕ್ರಮ ಗಣಿಗಾರಿಕೆ ಕುರಿತಂತೆ, 10 ‘ಸಿ’ ಪ್ರವರ್ಗದ ಮೈಸೂರು ಮ್ಯಾಂಗನೀಸ್ ಕಂಪನಿ, ಎಂ.ದಶರಥ ರಾಮಿ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಕರ್ನಾಟಕ ಲಿಂಪೊ, ಅಂಜನಾ ಮಿನರಲ್ಸ್, ರಝಿಯಾ ಖಾನುಂ, ಮಿಲನ ಮಿನರಲ್ಸ್ (ಮಹಾಲಕ್ಷಿ ಅಂಡ್ ಕಂ), ಎಂ.ಶ್ರೀನಿವಾಸುಲು, ಚನ್ನಕೇಶವ ರೆಡ್ಡಿ (ಲಕ್ಷ್ಮೀನರಸಿಂಹ ಮೈನಿಂಗ್ ಕಂಪನಿ) ಮತ್ತು ಜಿ.ರಾಯಶೇಖರ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಲೋಕಾಯುಕ್ತದ ವಿಶೇಷ ತನಿಖಾ ದಳಕ್ಕೆ ವಹಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News