ʼಘಜಿನಿʼ ಸಹೋದರರಿಗೆ ತಮ್ಮ ಮಾತುಗಳು ಕೆಲವೇ ತಿಂಗಳಲ್ಲಿ ಮರೆತುಹೋಗುತ್ತದೆ : ಬಿ.ವಿ.ಶ್ರೀನಿವಾಸ್ ವ್ಯಂಗ್ಯ
ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ನಡೆಸಲು ನಿರ್ಧರಿಸುತ್ತಿದ್ದಂತೆಯೇ, ಇದುವರೆಗೂ ಜಾತಿ ಜನಗಣತಿಯನ್ನು ವಿರೋಧಿಸುತ್ತಾ ಬಂದಿದ್ದ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ನಾಯಕರು ಏಕಾಏಕಿ ಜಾತಿಜನಗಣತಿಯ ಪರವಾಗಿ ಮಾತನಾಡಲು ಆರಂಭಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಜಾತಿ ಜನಗಣತಿ ನಡೆಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸುತ್ತಿದ್ದಾಗ ಬಿಜೆಪಿ ನಾಯಕರು ಅವರನ್ನು ವಿರೋಧಿಸುತ್ತಿದ್ದರು. ಜಾತಿ ಹೆಸರಿನಲ್ಲಿ ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದೆಲ್ಲಾ ಆರೋಪಗಳನ್ನು ಮಾಡಲಾಗಿತ್ತು.
ಇದೀಗ ಮೋದಿ ಸರಕಾರವೇ ಜಾತಿ ಜನಗಣತಿ ನಡೆಸುವ ತೀರ್ಮಾನಕ್ಕೆ ಬಂದಿದ್ದು, ಈ ಮೊದಲು ಜಾತಿ ಜನಗಣತಿಯನ್ನು ವಿರೋಧಿಸುತ್ತಿದ್ದವರ ವರಸೆ ಬದಲಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಎನ್‌ಡಿಎ ಪಾಲುದಾರ ಜೆಡಿಎಸ್ ನ ನಾಯಕ ಎಚ್.ಡಿ.ಕುಮಾರಸ್ವಾಮಿ ಮೊದಲಾದ ರಾಜಕಾರಣಿಗಳು ಜಾತಿಗಣತಿಯನ್ನು ಮಾಡುವ ಮೋದಿ ಸಂಪುಟದ ನಿರ್ಧಾರಕ್ಕೆ ಬೆಂಬಲಿಸಿದ್ದು, ಅವರು ಈ ಹಿಂದೆ ಜಾತಿ ಗಣತಿಯನ್ನು ವಿರೋಧಿಸಿರುವ ಟ್ವೀಟ್ ಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಮುನ್ನಲೆಗೆ ಬಂದಿದೆ.
ಈ ಟ್ವೀಟ್ ಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟ್ರೋಲ್ ಗಳಿಗೆ ಗುರಿಯಾಗಿದ್ದು, ಹಿಂದೊಮ್ಮೆ ʼಅಪಾಯಕಾರಿʼ ಆಗಿದ್ದ ಸಂಗತಿ (ಜಾತಿ ಜನಗಣತಿ), ಈಗ ʼಐತಿಹಾಸಿಕʼ ನಿರ್ಧಾರವಾಗಿರುವುದು ಹೇಗೆ ಎಂದು ತೇಜಸ್ವಿ ಸೂರ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಹಳೆಯ ಹಾಗೂ ಹೊಸ ಟ್ವೀಟ್ ಗಳನ್ನು ಇಟ್ಟುಕೊಂಡು ಯುವ ಕಾಂಗ್ರೆಸ್ ನಾಯಕ ಬಿ.ವಿ.ಶ್ರೀನಿವಾಸ್ ಅವರು ಪ್ರಶ್ನಿಸಿದ್ದಾರೆ.
ಎಚ್.ಡಿಕೆ ಹಾಗೂ ತೇಜಸ್ವಿ ಸೂರ್ಯರನ್ನು ʼಘಜಿನಿʼ ಚಿತ್ರದ ಪಾತ್ರಧಾರಿಗೆ ಹೋಲಿಸಿರುವ ಬಿವಿ ಶ್ರೀನಿವಾಸ್ ಅವರು ʼಕರ್ನಾಟಕದ ಈ ಇಬ್ಬರು ಘಜಿನಿ ಸಹೋದರರಿಗೆ ತಾವು ಒಮ್ಮೆ ಹೇಳಿದ ಮಾತುಗಳು ಕೆಲವೇ ತಿಂಗಳಲ್ಲಿ ಮರೆತುಹೋಗುತ್ತದೆ” ಎಂದು ಲೇವಡಿ ಮಾಡಿದ್ದಾರೆ.