×
Ad

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತರಿಗೆ ಸೇರಿದ 16 ಕಡೆ ಸಿಬಿಐ ಶೋಧ

Update: 2025-09-16 18:45 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಸಂಬಂಧಿಕರು, ಆಪ್ತರಿಗೆ ಸಂಬಂಧಿಸಿದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ಸೆ.15ರ ಸೋಮವಾರ ಶೋಧ ನಡೆಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಬಳ್ಳಾರಿಯಲ್ಲಿರುವ ಬಿ.ನಾಗೇಂದ್ರ ಅವರ ಸಹೋದರಿ, ಭಾವ, ಆಪ್ತ ಸಹಾಯಕ ಸೇರಿದಂತೆ ಇತರೆ ಕೆಲ ಆಪ್ತರ ಮನೆಗಳು, ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದು, ದಾಳಿ ಸಂದರ್ಭದಲ್ಲಿ ಆಸ್ತಿಗೆ ಸಂಬಂಧಿಸಿದ ಕೆಲವು ದಾಖಲೆಗಳು, ಬ್ಯಾಂಕ್ ದಾಖಲೆಗಳು, ವಂಚನೆಯ ಹಣದಲ್ಲಿ ಖರೀದಿಸಲಾಗಿದೆ ಎನ್ನಲಾದ ಕೆಲವು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಪ್ರಕಟನೆಯಲ್ಲಿ ಹೇಳಿದೆ.

ಬೆಂಗಳೂರಿನ ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್‍ನ ಶಾಖೆಯಲ್ಲಿರುವ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಿಂದ 2024ರ ಫೆಬ್ರವರಿ ಹಾಗೂ ಮೇ ತಿಂಗಳುಗಳಲ್ಲಿ 84.63 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಆರೋಪ ಕೇಳಿ ಬಂದಿತ್ತು. ಬ್ಯಾಂಕ್‍ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಈ ಕುರಿತು ಸಿಬಿಐಗೆ ದೂರು ನೀಡಿದ್ದರು.

ಬೆಂಗಳೂರಿನ ಸಿದ್ದಯ್ಯ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಖಾತೆಯಲ್ಲಿನ 2.17 ಕೋಟಿ ರೂ. ಹಣವನ್ನು ಎಸ್‍ಕೆಆರ್ ಇನ್‍ಫ್ರಾಸ್ಟ್ರಕ್ಚರ್ ಹಾಗೂ ಗೋಲ್ಡನ್ ಎಸ್ಟಾಬ್ಲಿಸ್ ಮೆಂಟ್ ಎಂಬ ಮಧ್ಯಂತರ ಕಂಪೆನಿಗಳ ಮೂಲಕ ಧನಲಕ್ಷ್ಮೀ ಎಂಟರ್‍ಪ್ರೈಸಸ್ ಸಂಸ್ಥೆಯ ಖಾತೆಗೆ ವರ್ಗವಾಗಿತ್ತು. ಆ ಸಂಸ್ಥೆ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತರಾಗಿರುವ ನೆಕ್ಕಂಟಿ ನಾಗರಾಜ್ ಅವರಿಗೆ ಸೇರಿದ್ದಾಗಿದೆ ಎಂಬುದನ್ನು ಸಿಬಿಐ ಪತ್ತೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News