×
Ad

ಅಟ್ಲಾಂಟ ಕನ್ನಡ ಕೂಟದಿಂದ ಸುವರ್ಣ ಮಹೋತ್ಸವದ ಸಂಭ್ರಮದ ಆಚರಣೆ

Update: 2023-10-31 10:28 IST

ವರದಿ: ಕೆ.ಆರ್. ಶ್ರೀನಾಥ್

ಅಟ್ಲಾಂಟದ ನೃಪತುಂಗ ಕನ್ನಡ ಕೂಟವು ಅಕ್ಟೋಬರ್ 28 ಹಾಗೂ 29ರಂದು ತನ್ನ 50ನೇ ವಾರ್ಷಿಕೋತ್ಸವ ಆಚರಿಸಿತು. ನಟರಾದ ಸಿಹಿ ಕಹಿ ಚಂದ್ರು, ಶ್ರೀನಾಥ್ ವಶಿಷ್ಠ, ನಮಿತಾ ರಾವ್, ವಿಕ್ರಮ್ ಸೂರಿ ಹಾಗೂ ನೃತ್ಯಗಾರರಾದ ನಿರುಪಮಾ, ರಾಜೇಂದ್ರ ಮತ್ತು ಯಕ್ಷಗಾನ ಕಲಾವಿದರಾದ ನವೀನ್,ಆದಿತ್ಯ, ಜಾದೂಗಾರ ಆಶಿಕ್ ಪ್ರಕಾಶ್ ಅವರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಅಭಿನಯಿಸಿ ಕಿಕ್ಕಿರಿದಿದ್ದ ಕನ್ನಡಿಗರನ್ನು ರಂಜಿಸಿದರು.

ಅಟ್ಲಾಂಟದ 'ವಿಶ್ವಮಾನವ' ಹವ್ಯಾಸಿ ನಾಟಕ ತಂಡದಿಂದ ಕುವೆಂಪುರವರ "ಜಲಗಾರ" ನಾಟಕ ಮತ್ತು ಇತರ ಸ್ಥಳೀಯ ಕಲಾವಿದರಿಂದ ನೃತ್ಯ, ಜಾನಪದ ಗಾಯನ ಹಾಗೂ ಚಿಣ್ಣರಿಂದ ಕನ್ನಡದ ದೇಶ ಭಕ್ತಿ ಗಾಯನ ಪ್ರಸ್ತುತ ಪಡಿಸಲಾಯಿತು.

ಎರಡು ದಿನವೂ ಕನ್ನಡಿಗರಿಗೆ ರುಚಿಕರವಾದ ಭರ್ಜರಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಹಾಗೆಯೇ "ಚಿಗುರು" ಸ್ಮರಣ ಸಂಚಿಕೆಯ ಪ್ರಕಟಣೆಯನ್ನು ಬಿಡುಗಡೆ ಮಾಡಲಾಯಿತು. ವಿಶೇಷವಾಗಿ ಸಿಂಗರಿಸಿದ್ದ ಕನ್ನಡ ರಥವನ್ನು ಕೊಡಗು, ಕಲ್ಯಾಣ ಕರ್ನಾಟಕ, ಬಯಲುಸೀಮೆ ಮತ್ತು ಕರಾವಳಿ ಶೈಲಿಯ ವೇಷಭೂಷಣ ಧರಿಸಿದ್ದ ಕನ್ನಡಿಗರು ತಮಟೆ, ಕಂಸಾಳೆ ವಾದ್ಯ, ನೃತ್ಯದ ಮೂಲಕ ಮೆರವಣಿಗೆ ಮಾಡಿದರು.

1973 ರಲ್ಲಿ ಸ್ಥಾಪಿತವಾದ ಅಟ್ಲಾಂಟ ನೃಪತುಂಗ ಕನ್ನಡ ಕೂಟವು ಯಶಸ್ವಿಯಾಗಿ 50 ವರ್ಷ ಪೂರೈಸಿ ಜಾರ್ಜಿಯಾ ರಾಜ್ಯದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಸ್ಥಳೀಯ ಅನಿವಾಸಿ ಕನ್ನಡಿಗರ ಕೊಂಡಿಯಾಗಿದೆ. ಈ ಸಂದರ್ಭದಲ್ಲಿ 2022ರಲ್ಲಿ ನಿಧನರಾದ ಸ್ಥಾಪಕರಾದ ಶ್ರೀ. ಹೊನ್ನವಳ್ಳಿ ರಾಮಸ್ವಾಮಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂಧರ್ಭದಲ್ಲಿ ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಯಾನ್ ಕೆಂಪ್ ಸಂದೇಶದ ಮೂಲಕ ಕನ್ನಡಿಗರ ಪರಿಶ್ರಮವನ್ನು ಶ್ಲಾಘಿಸಿ, ಅಮೇರಿಕಾದ ಸಂಸ್ಕೃತಿಯೊಂದಿಗೆ ಕನ್ನಡಿಗರು ಸಮೀಕರಣಗೊಂಡರೂ ಮಾತೃಭಾಷೆ ಕನ್ನಡದ ಮೇಲಿರುವ ಪ್ರೇಮವನ್ನು ಉಳಿಸಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News