×
Ad

‘ಎಂಐಎಸ್ ಅಡಿಯಲ್ಲಿ ಮಾವು ಖರೀದಿ’: ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರಕಾರ

Update: 2025-06-24 21:19 IST

ಸಾಂದರ್ಭಿಕ ಚಿತ್ರ (Grok)

ಬೆಂಗಳೂರು: ತೀವ್ರ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶಿಸಿ ಮಾವನ್ನು ಖರೀದಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರಕಾರ ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಧಾವಿಸಿದೆ.

ಮಂಗಳವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರಕಟಣೆ ಹೊರಡಿಸಿದ್ದು, ‘ಕೇಂದ್ರ ಸರಕಾರದ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆಯಡಿಯಲ್ಲಿ 2025-26ನೆ ಸಾಲಿಗೆ ಅನ್ವಯ ಆಗುವಂತೆ 2,50,000 ಮೆಟ್ರಿಕ್ ಟನ್ ಮಾವನ್ನು ಪ್ರತಿ ಕ್ವಿಂಟಾಲ್‍ಗೆ 1,616 ರೂಪಾಯಿಯಂತೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಪ್ರಧಾನಿ ಮೋದಿ ನೇತೃತ್ವದ ಸರಕಾರದ ರೈತಪರ ಬದ್ಧತೆ, ಅಚಲತೆಗೆ ನನ್ನ ಧನ್ಯವಾದಗಳು. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿದ ತಕ್ಷಣವೇ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ ಬೆಂಬಲ ಬೆಲೆ ಘೋಷಿಸಿದ್ದಕ್ಕಾಗಿ ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‍ರಿಗೆ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಮೋದಿಯವರ ಆಡಳಿತದಲ್ಲಿ ರೈತರ ಉತ್ಪನ್ನಗಳಿಗೆ ಸ್ಥಿರ ಬೆಲೆಯ ಖಾತರಿ ಸದಾ ಇರುತ್ತದೆ ಎಂಬುದನ್ನು ಈ ಉಪಕ್ರಮವು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಬಗ್ಗೆ ತುರ್ತು ಕ್ರಮ ವಹಿಸಿ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಕೋರಿದ್ದೆ. ನನ್ನ ಮನವಿಗೆ ತಕ್ಷಣವೇ ಸ್ಪಂದಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಧನ್ಯವಾದಗಳು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

‘ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದು. ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಹೆಚ್ಚಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು 8ರಿಂದ 10ಲಕ್ಷ ಟನ್ ಮಾವು ಈ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ದುರದೃಷ್ಟದ ಸಂಗತಿ ಎಂದರೆ, ಹವಾಮಾನ ವೈಪರೀತ್ಯದಿಂದ ರೋಗರುಜಿನ ತಗುಲಿ ಪ್ರಸಕ್ತ ವರ್ಷದಲ್ಲಿ ಮಾವಿನ ಇಳುವರಿ ಶೇ.30ರಷ್ಟು ಕಡಿಮೆಯಾಗಿದೆ’ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ, ಕೇಂದ್ರ ಕೃಷಿ ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News