ಬರ ಅಧ್ಯಯನ ಮುಗಿಸಿದ ಕೇಂದ್ರ ತಂಡ, ಶೀಘ್ರ ಪರಿಹಾರ ಸಾಧ್ಯತೆ: ಸಚಿವ ಕೃಷ್ಣ ಭೈರೇಗೌಡ
ಕಂದಾಯ ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು: ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೇಂದ್ರ ಅಧ್ಯಯನ ತಂಡ ರಾಜ್ಯ ಸರಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಬರ ಪರಿಹಾರ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಜೊತೆಗಿನ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಕಳೆದ ಮೂರು ದಿನಗಳಲ್ಲಿ ಮೂರು ತಂಡವಾಗಿ ರಾಜ್ಯದ ಎಲ್ಲ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳ ಜೊತೆಗೂ ಚರ್ಚಿಸಿದ್ದಾರೆ ಎಂದರು.
ಬರ ಘೋಷಣೆ ಸಂಬಂಧ ರಾಜ್ಯ ಸರಕಾರ ಸಲ್ಲಿಸಿರುವ ಮನವಿ ವಸ್ತುಸ್ಥಿತಿಯಿಂದ ಕೂಡಿದೆ ಎಂದು ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆ ಶೀಘ್ರದಲ್ಲೇ ಬರ ಪರಿಹಾರ ಹಣ ರಾಜ್ಯಕ್ಕೆ ಸಂದಾಯವಾಗಲಿದೆ ಎಂಬ ವಿಶ್ವಾಸ ಇದೆ ಎಂದ ಅವರು, 195 ತಾಲೂಕುಗಳ ಜೊತೆಗೆ ಎರಡನೆ ಹಂತದಲ್ಲಿ ಕೇಂದ್ರದ ಮಾನದಂಡದಂತೆ ಮತ್ತೆ 21 ತಾಲೂಕುಗಳ ಬರ ಘೋಷಣೆಗೆ ಸಿದ್ದತೆ ನಡೆಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ರಾಜ್ಯದ್ಯಂತ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಅಕ್ಟೋಬರ್ ತಿಂಗಳ ಕೊನೆಯವರೆಗೆ ಮತ್ತೊಂದು ಹಂತದಲ್ಲಿ ಬರ ಪೀಡಿತ ತಾಲೂಕುಗಳ ಘೋಷಿಸಲು ರಾಜ್ಯ ಸರಕಾರಕ್ಕೆ ಅವಕಾಶ ಇದೆ. ಹೀಗಾಗಿ ಉಳಿದ 41 ತಾಲೂಕುಗಳ ಪೈಕಿ 11 ಜಿಲ್ಲೆಗಳ 21 ತಾಲೂಕುಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮಾಹಿತಿ ಕೈಗೆ ಸಿಗುತ್ತಿದ್ದಂತೆ ಬರ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರಕ್ಕೆ ಮತ್ತೆ ಪತ್ರ: ಬರ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಾನದಂಡ ಅನಾನುಕೂಲತೆಯಿಂದ ಕೂಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರು, ಕೇಂದ್ರ ಕೃಷಿ ಸಚಿವರನ್ನು ಖುದ್ದು ಭೇಟಿ ಮಾಡಿ ಚರ್ಚಿಸಲು ಹಾಗೂ ಬರ ಘೋಷಣೆಗೆ ಸಂಬಂಧಿಸಿದಂತೆ ರಾಜ್ಯದ ಮನವಿ ಪತ್ರ ನೀಡಲು ಅವಕಾಶ ನೀಡುವಂತೆ ಇಂದು ಮತ್ತೊಂದು ಪತ್ರ ಬರೆಯಲಾಗುವುದು ಎಂದರು.
ಈ ಹಿಂದೆಯೇ ಕೇಂದ್ರದ ಸಚಿವರ ಭೇಟಿಗೆ ಅವಕಾಶ ನೀಡುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಪತ್ರ ಬರೆದು ಒತ್ತಾಯಿಸಿದ್ದರು. ಆದರೆ, ಭೇಟಿಗೆ ಅವಕಾಶ ನೀಡಲಾಗಿರಲಿಲ್ಲ. ಆನ್ ಲೈನ್ ಮೂಲಕ ಮನವಿ ಪತ್ರ ಸಲ್ಲಿಸಲು ಸೂಚಿಸಲಾಗಿತ್ತು. ಹೀಗಾಗಿ ಎರಡನೇ ಹಂತದ ಬರ ಘೋಷಣೆ ಮನವಿಯನ್ನಾದರೂ ಖುದ್ದು ಭೇಟಿಯಾಗಿ ಸ್ವೀಕರಿಸುವಂತೆ ಇಂದು ಮತ್ತೊಂದು ಪತ್ರ ಬರೆಯಲಾಗುವುದು ಎಂದೂ ಅವರು ಹೇಳಿದರು.
ಕೆಲವು ಬರ ಪೀಡಿತ ತಾಲೂಕುಗಳಲ್ಲಿ ಹಸಿರು ತೆನೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಬೆಳೆ ಮಾತ್ರ ರೈತರ ಕೈಸೇರುತ್ತಿಲ್ಲ. ಮನವಿ ಪತ್ರದಲ್ಲಿ ಇದನ್ನು ರಾಜ್ಯ ಸರಕಾರ ಹಸಿರು ಬರ ಎಂದು ಉಲ್ಲೇಖಿಸಿತ್ತು. ಹಲವೆಡೆ ಬರ ಪರಿಶೀಲನೆ ನಡೆಸಿದ ಕೇಂದ್ರ ಅಧ್ಯಯನ ತಂಡಕ್ಕೆ ವಿಜ್ಞಾನಿಗಳ ಮೂಲಕ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ಹಸಿರು ಬರವನ್ನು ಕೇಂದ್ರದ ತಂಡವೂ ಒಪ್ಪಿಕೊಂಡಿದೆ ಎಂದು ತಿಳಿಸಿದರು.