ಸಿಇಟಿ: 3ನೆ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ
ಬೆಂಗಳೂರು, ಸೆ.10: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‍ಗಳ ಎರಡನೆ ಹಾಗೂ ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿಸಿಇಟಿ ಕೋರ್ಸ್‍ಗಳ 3ನೆ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಿದೆ.
ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಫಲಿತಾಂಶಕ್ಕೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಸೆ.11ರಂದು ಬೆಳಿಗ್ಗೆ 11ಗಂಟೆ ಒಳಗೆ ಇ-ಮೇಲ್ (keauthority-ka@nic.in) ಮೂಲಕ ತಿಳಿಸಬಹುದು. ಪರಿಶೀಲನೆ ಬಳಿಕ ನಾಳೆಯೇ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂತಿಮ ಫಲಿತಾಂಶ ಪ್ರಕಟಣೆ ನಂತರ ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿಸಿಇಟಿ ಕೋರ್ಸ್ ಗಳ ಅಭ್ಯರ್ಥಿಗಳು ಸೆ.13ರೊಳಗೆ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‍ಲೋಡ್ ಮಾಡಿಕೊಂಡು ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೆ ಸುತ್ತಿನ ಸೀಟು ಹಂಚಿಕೆ ಫಲಿತಾಂಶದ ದಿನಾಂಕವನ್ನು ಎಂಸಿಸಿ ಮುಂದೂಡಿರುವ ಕಾರಣ ರಾಜ್ಯದಲ್ಲಿ ಈ ಕೋರ್ಸ್ ಗಳ ಪ್ರವೇಶಕ್ಕೆ ಅಭ್ಯರ್ಥಿಗಳು ಮುಂದಿನ ಸೂಚನೆಗಾಗಿ ಕಾಯ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಎಂಜಿನಿಯರಿಂಗ್ ಸೇರಿದಂತೆ ಯುಜಿಸಿಇಟಿ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಹಿಂದಿನ ಸುತ್ತಿನಲ್ಲಿ ಶುಲ್ಕ ಅಥವಾ ಕಾಷನ್ ಡೆಪಾಸಿಟ್ ಪಾವತಿಸಿದ್ದರೆ ಅದನ್ನು ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.