×
Ad

ಕುಟುಂಬದಲ್ಲಿದ್ದ ಹಾಗೆ ಪಕ್ಷದಲ್ಲೂ ಆಪಾದನೆಗಳು ಸಹಜ : ಛಲವಾದಿ ನಾರಾಯಣಸ್ವಾಮಿ

Update: 2025-02-03 20:18 IST

ಛಲವಾದಿ ನಾರಾಯಣಸ್ವಾಮಿ 

ಬೆಂಗಳೂರು : ರಾಜಕಾರಣದಲ್ಲಿ ನಾನು ಹರಿಶ್ಚಂದ್ರನನ್ನು ಹುಡುಕುವುದಿಲ್ಲ. ಆಪಾದನೆಗಳು ಬರುವುದು ಸಹಜ, ಅದನ್ನು ಸಹಿಸಬೇಕು. ಕುಟುಂಬದಲ್ಲಿ ಇರುವುದಿಲ್ಲವೇ, ಹಾಗೆಯೇ ಪಕ್ಷದಲ್ಲೂ ಬರುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡರು.

ಸೋಮವಾರ ವಿಧಾನಸೌಧದಲ್ಲಿನ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ನಾಯಕರ ಪಕ್ಷವಲ್ಲ. ಬದಲಿಗೆ ನಮ್ಮದು ಕಾರ್ಯಕರ್ತರುಗಳೇ ನಾಯಕರುಗಳನ್ನು ತಯಾರು ಮಾಡುವ ಪಕ್ಷ ಎಂದರು.

ನಮ್ಮಲ್ಲಿ ಅಧಿಕಾರಕ್ಕಾಗಿ ಹೊಡೆದಾಟ ಇಲ್ಲ. ಅಧ್ಯಕ್ಷ ಸ್ಥಾನ ಅಧಿಕಾರದ ಸ್ಥಾನ ಅಲ್ಲ. ಅದು ಸಂಘಟನೆಯ ಸ್ಥಾನ. ನಮ್ಮ ಪಕ್ಷ ಈಗ ಮಜಬೂತ್ ಆಗಿಯೇ ಇದೆ. ಚೆನ್ನಾಗಿ ನಡೆಯುತ್ತಿದೆ. ಆದರೂ, ಪಕ್ಷದಲ್ಲಿ ಏನಾದರೂ ವ್ಯತ್ಯಾಸ ಆದರೆ ಹೈಕಮಾಂಡ್ ಮೂಲಕ ಆಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಪಕ್ಷದ ಭಿನ್ನಾಭಿಪ್ರಾಯಗಳನ್ನು ಜೆ.ಪಿ.ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ರಾಧಾ ಮೋಹನ್‍ದಾಸ್ ಅವರ ಗಮನಕ್ಕೆ ತಂದಿದ್ದೇವೆ. ಹೈಕಮಾಂಡ್‍ನವರು ದಿಲ್ಲಿ ಚುನಾವಣೆ, ಬಜೆಟ್ ವಿಚಾರದಲ್ಲಿ ಮಗ್ನರಾಗಿರುವುದರಿಂದ ರಾಜ್ಯ ಬಿಜೆಪಿ ಕಡೆಗೆ ಅಷ್ಟು ಗಮನ ಹರಿಸಲು ಸಾಧ್ಯವಾಗಿಲ್ಲ ಅಷ್ಟೆ. ಸದ್ಯದಲ್ಲೇ ಉತ್ತರ ಬರುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಕಾಂಗ್ರೆಸ್‍ನಲ್ಲಿ 60-70 ಜನ ಮಂತ್ರಿಯಾಗಲು ಕಾಯುತ್ತಿರುವವರು ಇದ್ದಾರೆ. ಮಂತ್ರಿ ಮಂಡಲ ವಿಸ್ತರಣೆಗೆ ಕೈಹಾಕಿದರೆ ಸರಕಾರ ಉಳಿಯುವುದಿಲ್ಲ. ಇರುವವರಲ್ಲಿ ಹಣ ಕಬಳಿಸಲು ಪೈಪೋಟಿ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಕೇಂದ್ರ ಸರಕಾರ ಬಜೆಟ್‍ಗೆ ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರಶಂಸೆಯ ಮಾತುಗಳೇ ಬಂದಿವೆ. ದೇಶದ ಜನತೆ ವಿವಿಧ ರೀತಿಯಲ್ಲಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರಕ್ಕೆ ವಿರೋಧ ಪಕ್ಷವಾಗಿರುವುದರಿಂದ ವಿರೋಧಗಳನ್ನು ಮಾಡಲೇಬೇಕಾಗಿದೆ, ಮಾಡುತ್ತಾರೆ ಅಷ್ಟೆ. ಆದರೆ ಅವರ ಟೀಕೆಗಳಲ್ಲಿ ಹುರುಳಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಒಂದು ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುವಂಥದ್ದಲ್ಲ: ಕಾಂಗ್ರೆಸ್ ಹೇಳುವಂತೆ, ಕೇಂದ್ರದ ಬಜೆಟ್ ಯಾವಾಗಲೂ ಒಂದು ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುವಂಥದ್ದಲ್ಲ. ರಾಜ್ಯ ಸರಕಾರ ಕೂಡ ಜಿಲ್ಲೆ ಜಿಲ್ಲೆಗೆ ಇಷ್ಟು ಹಣ ಇಟ್ಟಿದ್ದೇವೆ ಅಂತ ಹೇಳುವುದಿಲ್ಲ. ಅದೇ ರೀತಿ ಇಡೀ ದೇಶದ ಬಜೆಟ್ ಮಂಡಿಸುವಾಗ ಈ ರಾಜ್ಯಕ್ಕೆ ಇಷ್ಟು ಆ ರಾಜ್ಯಕ್ಕೆ ಇಷ್ಟು ಅಂತ ಹೇಳುವುದಿಲ್ಲ. ಕರ್ನಾಟಕಕ್ಕೆ ಏನೂ ಕೊಟ್ಟೇ ಇಲ್ಲ ಎನ್ನುವುದು ಹಾಸ್ಯಾಸ್ಪದ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಪ್ರಬುದ್ಧರೋ, ಅಪ್ರಬುದ್ಧರೋ?: ಪ್ರಿಯಾಂಕ್ ಖರ್ಗೆಯವರ ಬಗ್ಗೆ ತೀಕ್ಷ್ಣವಾಗಿಯೇ ಮಾತಾಡಬೇಕಾಗುತ್ತದೆ. ಹಿಂದೂ ಧರ್ಮದಲ್ಲಿ ಸಮಾನತೆ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡುವ ಅವರು ಪ್ರಬುದ್ಧರೋ, ಅಪ್ರಬುದ್ಧರೋ ಅಂತ ನನಗೆ ಗೊತ್ತಿಲ್ಲ. ತಾವು ಯಾವ ಧರ್ಮದವರು ಎಂದು ರಾಜ್ಯದ ಜನತೆಗೆ ತಿಳಿಸಬೇಕು. ಹಿಂದೂ ಧರ್ಮದವರನ್ನು ಕ್ಷಮೆ ಕೇಳಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News