ದಲಿತರ ಹಣ ದುರ್ಬಳಕೆ ವಿರುದ್ಧ ಜನಾಂದೋಲನ : ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ದಲಿತರ ಹಣ ಅನ್ಯ ಉದ್ದೇಶಕ್ಕೆ ಬಳಕೆ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಶನಿವಾರ ಶಾಸಕರ ಭವನದಲ್ಲಿ ಆಯೋಜಿಸಿದ್ದ ದಲಿತ ಸಂಘಟನೆಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸಂಘಟನೆಗಳು ಇದಕ್ಕಾಗಿ 10 ತಂಡಗಳನ್ನು ರಚಿಸಲಿವೆ. ಇನ್ನೊಂದು ವಾರದ ಒಳಗೆ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯದೆಲ್ಲೆಡೆ ಪ್ರವಾಸದ ಬಳಿಕ ಬೆಂಗಳೂರಿನಲ್ಲಿ ಸಮುದಾಯದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಈ ಸರಕಾರಕ್ಕೆ ತಕ್ಕ ಪಾಠ ಕಲಿಸಲು ತೀರ್ಮಾನ ಮಾಡಿದ್ದಾರೆ. ಎಸ್ಸಿಪಿ-ಟಿಎಸ್ಪಿ ಕಾಯ್ದೆ ಉಲ್ಲಂಘನೆ ಸಂಬಂಧ ನಾವು ನ್ಯಾಯಾಲಯದ ಮೊರೆ ಹೋಗಲಿದ್ದೇವೆ. ಸರಕಾರವನ್ನು ಕಟಕಟೆಗೆ ತಂದು ನಿಲ್ಲಿಸುವ ಕೆಲಸ ನಮ್ಮಿಂದ ಆಗಲಿದೆ ಎಂದು ಅವರು ಹೇಳಿದರು.
ದಲಿತರಿಗೆ ಆಗಿರುವ ಅನ್ಯಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸರಿಪಡಿಸಲು ಮತ್ತು ನ್ಯಾಯ ದೊರಕಿಸಿಕೊಡಲು ರಾಜ್ಯಾದ್ಯಂತ ಹೋರಾಟ ಮಾಡಿದ್ದೇವೆ. ಈಗ ದಲಿತ ಮುಖಂಡರು, ಸಂಘಟನೆಗಳು ಸೇರಿದ್ದರಿಂದ ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿದ ನಾರಾಯಣಸ್ವಾಮಿ, ದಲಿತರನ್ನು ದಲಿತರ ವಿರುದ್ಧವೇ ಎತ್ತಿ ಕಟ್ಟಿ ಅವರನ್ನು ದಮನ ಕೆಲಸ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಸರಕಾರ ಐದು ವರ್ಷವೂ ಕೇವಲ ಗ್ಯಾರಂಟಿಗಳಲ್ಲೆ ಕಾಲ ಹರಣ ಮಾಡುತ್ತದೆಯೇ? ರಾಜ್ಯದ ಅಭಿವೃದ್ಧಿ ಮಾಡಲು ಇವರಿಗೆ ಯೋಗ್ಯತೆ ಇಲ್ಲವೇ? ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.
ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ದಲಿತ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.