×
Ad

ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ : ಛಲವಾದಿ ನಾರಾಯಣಸ್ವಾಮಿ

Update: 2025-07-19 19:24 IST

ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಬೀದಿಬದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ, ಸರಕು ಸೇವಾ ತೆರಿಗೆ(ಜಿಎಸ್ಟಿ) ನೋಟಿಸ್ ನೀಡುತ್ತಿರುವ ಹಿನ್ನೆಲೆಯಲ್ಲಿ ವರ್ತಕರು ಆತಂಕಗೊಂಡಿದ್ದಾರೆ. ಹೀಗಾಗಿ ಬಿಜೆಪಿ ವತಿಯಿಂದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗಾಗಿ ಸಹಾಯವಾಣಿ (88842 45123)ಯನ್ನು ಆರಂಭಿಸಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಶನಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್ಟಿ ನೋಟಿಸ್ ವಿಚಾರದಲ್ಲಿ ಗೊಂದಲ ಶುರುವಾಗಿದ್ದು, ಬಡ ವ್ಯಾಪಾರಿಗಳಲ್ಲಿ ಆತಂಕದ ಛಾಯೆ ಮೂಡಿದೆ. ಇದರ ಪರಿಹಾರೋಪಾಯಗಳನ್ನು ಸರಕಾರ ಮಾಡಬೇಕಿತ್ತು. ಆದರೆ, ರಾಜ್ಯ ಸರಕಾರ ಎಲ್ಲಿಯೂ ನಿಜವಾದ ತೆರಿಗೆ ಮೊತ್ತ ಯಾವುದು ಮತ್ತು ವಿಧಿಸಲಾಗದ ತೆರಿಗೆ ಮೊತ್ತ ಯಾವುದು ಎಂದು ಕೂಲಂಕಶ ಚರ್ಚೆ ಮಾಡಿಲ್ಲ ಮತ್ತು ವ್ಯಾಪಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು

ಕೇಂದ್ರದ ಮೂಲಕ ರಾಜ್ಯ ಸರಕಾರಕ್ಕೆ ಇರುವ ಮಾಹಿತಿಯ ಪ್ರಕಾರ ವಾರ್ಷಿಕ ವಹಿವಾಟು 40 ಲಕ್ಷ ರೂ. ಮೀರಿದರೆ ಅವರು ಜಿಎಸ್‍ಟಿಯಡಿ ನೋಂದಾಯಿಸಿಕೊಳ್ಳಬೇಕು. ಜಿಎಸ್‍ಟಿ ವಾರ್ಷಿಕ ವಹಿವಾಟು 20 ಲಕ್ಷ ರೂ. ಮೀರಿರುವ ಸೇವಾ ಪೂರೈಕೆದಾರರು ತೆರಿಗೆ ಕಟ್ಟಬೇಕು ಎಂದು ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಿದ್ದಾರೆ. ಆದರೆ ಇದು ಸಲ್ಲದು ಎಂದು ಅವರು ಆಕ್ಷೇಪಿಸಿದರು.

ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಕಳ್ಳರಲ್ಲ ಮತ್ತು ತೆರಿಗೆಯನ್ನು ವಂಚಿಸುವವರಲ್ಲ. ಆದರೆ ತೆರಿಗೆಯ ಪರಿಸ್ಥಿತಿ ಅವರಿಗೆ ಅರ್ಥವಾಗಿಲ್ಲ ಮತ್ತು ಸರಕಾರದವರು ಅವರಿಗೆ ಅರ್ಥ ಮಾಡಿಸಿಲ್ಲ. ಬಡ ವ್ಯಾಪಾರಿಗಳು ಗೊಂದಲದಲ್ಲಿದ್ದಾರೆ ಹಾಗೂ ಆತಂಕಗೊಂಡಿದ್ದಾರೆ. ಆದ್ದರಿಂದ ಸರಕಾರ ಇದನ್ನು ಗಮನಿಸಿ, ಬಡಜನರ ರಕ್ಷಣೆಗೆ ಧಾವಿಸಬೇಕು ಎಂದು ಅವರು ಆಗ್ರಹಿಸಿದರು.

ಶೇ.90ರಷ್ಟು ವರ್ತಕರಿಗೆ ರಾಜ್ಯ ಜಿಎಸ್‍ಟಿ ಘಟಕದ ವತಿಯಿಂದ ಯಾವುದೇ ಮಾಹಿತಿ ನೀಡದೆ ಮತ್ತು ತೆರಿಗೆ ಮಾಹಿತಿಯನ್ನು ಕೊಡದೆ ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದ್ದಾರೆ. ಆದ್ದರಿಂದ ಅಧಿಕಾರಿಗಳು ವ್ಯಾಪಾರಿಗಳಿಗೆ ನೀಡಿರುವ 14,000 ನೋಟಿಸ್ ಕಾನೂನಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನ ವಿರುದ್ಧವಾಗಿದೆ ಎಂದು ಅವರು ಆಕ್ಷೇಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News