×
Ad

ಪ್ರತಿಪಕ್ಷದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ : ಛಲವಾದಿ ನಾರಾಯಣಸ್ವಾಮಿ ಆರೋಪ

"ಶಾಸಕ ಚಂದ್ರು ಲಮಾಣಿ ಕಾಂಗ್ರೆಸ್ ಸರಕಾರದ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ"

Update: 2026-02-22 19:31 IST

ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ‘ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿಯ ಶಾಸಕ ಡಾ.ಚಂದ್ರು ಲಮಾಣಿ ಅವರು ಕಾಂಗ್ರೆಸ್ ಸರಕಾರದ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ. ಈ ಸರಕಾರ ಪ್ರತಿಪಕ್ಷದವರನ್ನು ಟಾರ್ಗೆಟ್ ಮಾಡುತ್ತಿದೆ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರಾದ ಬೈರತಿ ಬಸವರಾಜು, ಸಿ.ಕೆ.ರಾಮಮೂರ್ತಿ, ವಿಪಕ್ಷ ನಾಯಕ ಆರ್.ಅಶೋಕ್ ಟಾರ್ಗೆಟ್ ಆಗಿದ್ದಾರೆ. ಇದೀಗ ಚಂದ್ರು ಲಮಾಣಿ ಸಿಕ್ಕಿ ಬಿದ್ದಿದ್ದಾರೆ. ನನ್ನ ವಿರುದ್ಧವೂ ಪಿತೂರಿ ಮಾಡಿದರೂ ನಾನು ಸಿಕ್ಕಲ್ಲ ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆಗೆ ಬೇರೇನೂ ಕೆಲಸವಿಲ್ಲ. ‘ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ, ವೀರನೂ ಅಲ್ಲ’ ಎಂಬ ಮಾತಿನಂತೆ ಅವರು ಹೆಸರಿಗೆ ದಲಿತ ನಾಯಕ, ಅವರಲ್ಲಿ ದಲಿತತ್ವ ಉಳಿದಿಲ್ಲ. ಅವರು ಒಬ್ಬ ರಾಜಕಾರಣಿಯೇ ಅಲ್ಲ. ಪ್ರಿಯಾಂಕ್ ಖರ್ಗೆ ಪರಿಶಿಷ್ಟ ಜಾತಿ ಒಳಮೀಸಲಾತಿ ಬಗ್ಗೆ ಒಂದು ದಿನವೂ ಮಾತಾಡಿಲ್ಲ. ಅಂಬೇಡ್ಕರ್ ಬಗ್ಗೆ ಮಾತಾಡಲು ಅವರಿಗೆ ನೈತಿಕತೆ ಇಲ್ಲ. ಅವರು ನನ್ನ ರಾಜೀನಾಮೆ ಕೇಳಿದ್ದಾರೆ. ನಾನ್ಯಾಕೆ ರಾಜೀನಾಮೆ ಕೊಡಲಿ? ಎಂದು ಸವಾಲು ಹಾಕಿದರು.

ನಾನು ಅವರ ಸ್ವಯಾರ್ಜಿತದಲ್ಲಿಯೂ ಇಲ್ಲ. ಅವರು ಅಪ್ಪನ ನೆರಳಲ್ಲಿ ರಾಜಕಾರಣ ಮಾಡುವವರು. ಪ್ರಿಯಾಂಕ್ ಖರ್ಗೆ ಒಬ್ಬ ಅನುತ್ತೀರ್ಣ ಅಭ್ಯರ್ಥಿ. ನಾನು ಕಾಂಗ್ರೆಸ್‍ನವರನ್ನು ಬೈಯುವುದಿಲಲ. ಆದರೆ, ಅವರ ಲೋಪದೋಷಗಳನ್ನು ಎತ್ತಿ ತೋರಿಸ್ತಿದ್ದೀನಿ ಅಷ್ಟೇ. ನನ್ನ ವಿರುದ್ಧ ಮಾತನಾಡುವ ಅವಿವೇಕಿಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News