2.67 ಲಕ್ಷ ಮೆ.ಟನ್ ಯೂರಿಯಾ ಪೂರೈಕೆಗೆ ಕೇಂದ್ರಕ್ಕೆ ಸಚಿವ ಚಲುವರಾಯಸ್ವಾಮಿ ಮನವಿ
ಬೆಂಗಳೂರು, ಆ.14 : ಕೇಂದ್ರ ಸರಕಾರವೇ 2025-26ನೆ ಸಾಲಿಗೆ ಹಂಚಿಕೆ ಮಾಡಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬಾರದೆ ರಾಜ್ಯದಲ್ಲಿ ಯೂರಿಯಾ ಕೊರತೆಯಾಗಿದ್ದು, ಅತ್ಯಂತ ತ್ವರಿತವಾಗಿ 2.67 ಲಕ್ಷ ಮೆಟ್ರಿಕ್ ಟನ್ ಪೂರೈಕೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.
ಗುರುವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಎಲ್ಲ ರಾಜ್ಯಗಳ ಕೃಷಿ ಸಚಿವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಕರ್ನಾಟಕದಲ್ಲಿ ರಸಗೊಬ್ಬರ ಸರಬರಾಜು ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದು, ಶೀಘ್ರ ಬಾಕಿ ಪೂರೈಕೆಗೆ ಅವರು ಬೇಡಿಕೆ ಸಲ್ಲಿಸಿದರು.
ರಾಜ್ಯ ವಿಧಾನಸಭೆ ಹಾಗೂ ವಿಧಾನಪರಿಷತ್ತು ಕಲಾಪಗಳಲ್ಲಿ ಎರಡು ದಿನ ರಸಗೊಬ್ಬರ ಕೊರತೆ ಬಗ್ಗೆ ನಡೆದ ಗಂಭೀರ ಚರ್ಚೆಗಳ ವಿಚಾರ ಹಾಗೂ ರಾಜ್ಯದ ಬೇಡಿಕೆ, ಕೇಂದ್ರದ ಹಂಚಿಕೆ ಮತ್ತು ಪೂರೈಕೆ ಪ್ರಮಾಣದ ಬಗ್ಗೆ ಕೇಂದ್ರ ಸಚಿವರಿಗೆ ಚಲುವರಾಯಸ್ವಾಮಿ ಮನವರಿಕೆ ಮಾಡಿಕೊಟ್ಟರು.
ಕರ್ನಾಟಕದಲ್ಲಿ ಖರೀಫ್ ವಿಕಸಿತ ಕೃಷಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ. ನಮ್ಮ ರಾಜ್ಯದಲ್ಲಿ ಜುಲೈ ತಿಂಗಳಿಗೆ 1.27 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಮತ್ತು ಆಗಸ್ಟ್ ತಿಂಗಳಿಗೆ 1.40 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊರತೆಯಿದೆ. ಒಟ್ಟಾರೆಯಾಗಿ 2.67 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಆದಷ್ಟು ಬೇಗ ಕರ್ನಾಟಕಕ್ಕೆ ವಿತರಿಸಲು ಅಗತ್ಯವಿದೆ ಎಂದು ಅವರು ವಿವರ ಒದಗಿಸಿದರು.
ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಬಿತ್ತನೆ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಸಬೇಕಿದೆ. ವಿಳಂಬವಾದಲ್ಲಿ ರೈತರ ಬೆಳೆಗೆ ಹಾನಿಯಾಗುವ ಸಂಭವವಿರುತ್ತದೆ. ಬಹುತೇಕ ಬೆಳೆಗಳಿಗೆ ಮೇಲುಗೊಬ್ಬರವಾಗಿ ಯೂರಿಯಾ ಬಳಸುವುದರಿಂದ ತುರ್ತಾಗಿ ಪೂರೈಕೆ ಮಾಡುವಂತೆ ಚಲುವರಾಯಸ್ವಾಮಿ ಮನವಿ ಮಾಡಿದರು.
ನಾವು ರಬಿ ಹಂಗಾಮಿನ ಗೊಬ್ಬರದ ಅವಶ್ಯಕತೆಗಳ ವಿವರ ಸಲ್ಲಿಸಿದ್ದು, ಅದರಂತೆ ಹಂಚಿಕೆ ಮಾಡಬೇಕು ಎಂದು ಚಲುವರಾಯಸ್ವಾಮಿ ಕೋರಿದರು. ಇದೇ ವೇಳೆ ತಾವು ರಸಗೊಬ್ಬರ ಇಲಾಖೆ ಕಾರ್ಯದರ್ಶಿ ಜೊತೆ ಮಾತನಾಡಿ ಆದಷ್ಟು ಬೇಗ ಕರ್ನಾಟಕಕ್ಕೆ ಬಾಕಿ ರಸಗೊಬ್ಬರ ಪೂರೈಕೆಯ ವ್ಯವಸ್ಥೆ ಮಾಡುವುದಾಗಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಉತ್ತರಪ್ರದೇಶದ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ ಮಾತನಾಡಿ ರಾಜ್ಯಕ್ಕೆ 18 ಲಕ್ಷ ಮೆ.ಟನ್ ಯೂರಿಯಾ ಹಂಚಿಕೆ ಮಾಡಲಾಗಿದ್ದು, ಈ ವರೆಗೆ ಕೇವಲ 12 ಲಕ್ಷ ಮೆ.ಟನ್ ಪೂರೈಕೆಯಾಗಿದೆ. ಇನ್ನು 6 ಲಕ್ಷ ಮೆ.ಟನ್ ವ್ಯತ್ಯಾಸವಿದ್ದು ಸಮಸ್ಯೆ ತಲೆದೂರಿದೆ. ಆದಷ್ಟು ಬೇಗ ಬಾಕಿ ಪೂರೈಕೆ ಮಾಡುವಂತೆ ಮನವಿ ಮಾಡಿದರು.
ಬಿಹಾರ, ಉತ್ತರಾಖಂಡ, ಛತ್ತೀಸ್‍ಗಡ ಸೇರಿದಂತೆ ವಿವಿಧ ರಾಜ್ಯಗಳ ಕೃಷಿ ಸಚಿವರು ತಮ್ಮ ರಾಜ್ಯಗಳಲ್ಲಿ ಉಂಟಾಗಿರುವ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರ ಕೊರತೆ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದರು.