×
Ad

ಸಿಎಂ ಸಭೆ ಅಪೂರ್ಣ : ‘ಭೂ ಸತ್ಯಾಗ್ರಹ’ ಮುಂದುವರೆಸಲು ಚನ್ನರಾಯಪಟ್ಟಣ ರೈತರ ತೀರ್ಮಾನ

Update: 2025-07-04 20:43 IST

ಬೆಂಗಳೂರು : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರ ಭೂಸ್ವಾಧೀನ ಸಂಬಂಧ ಶುಕ್ರವಾರ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿನ ರೈತರ ಸಭೆಯು ಅಪೂರ್ಣಗೊಂಡ ಹಿನ್ನೆಲೆಯಲ್ಲಿ ‘ಭೂ ಸತ್ಯಾಗ್ರಹ’ ಹೋರಾಟವನ್ನು ಮುಂದುವರೆಸುವುದಾಗಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ತೀರ್ಮಾನಿಸಿದೆ.

ಜು.15ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಕೊಟ್ಟಿರುವುದರಿಂದ ಅಲ್ಲಿಯವರೆಗೂ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ಪೈಕಿ ದಿನಕ್ಕೊಂದು ಹಳ್ಳಿಯಲ್ಲಿ ಭೂ ಸತ್ಯಾಗ್ರಹ ಹೋರಾಟ ಜರುಗಲಿದೆ. ಈ ಹೋರಾಟದಲ್ಲಿ ಆ ಭಾಗದವರು ಪಾಲ್ಗೊಳ್ಳಲಿದ್ದಾರೆ ಎಂದು ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡರು ತಿಳಿಸಿದ್ದಾರೆ.

ಶುಕ್ರವಾರ ಈ ಸಂಬಂಧ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಭೂ ಸತ್ಯಾಗ್ರಹ ವೇದಿಕೆಯಲ್ಲಿ ಸಿಎಂ ಭೇಟಿ ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡ ಬಡಗಲಪುರ ನಾಗೇಂದ್ರ, ಸಿಎಂ ಸಿದ್ದರಾಮಯ್ಯ 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಜು.15ರ ಬೆಳಗ್ಗೆ 11 ಗಂಟೆಗೆ ಮತ್ತೆ ಸಭೆ ಕರೆದಿದ್ದಾರೆ. ಆ ಸಭೆ ಬರುತ್ತೇವೆ. ಆದರೆ, ಅಂತಿಮ ತೀರ್ಮಾನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಭೂ ಸ್ವಾಧೀನವನ್ನು ಕೈಬಿಡುತ್ತೀನೆಂದಷ್ಟೇ ನೀವು ಹೇಳಬೇಕು ಎಂಬುವುದಾಗಿ ಸಿಎಂಗೆ ತಿಳಿಸಿ ಬಂದಿದ್ದೇವೆ ಎಂದರು.

ಸಚಿವರಾದ ಕೆ.ಎಚ್.ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್ ಕುತಂತ್ರದಿಂದ ರೈತರ ಭೂಮಿ ಕಬಳಿಸಲು ಭೂಗಳ್ಳರಾಗಿ ನಿಂತಿದ್ದಾರೆ. ಅವರಿಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದೇವೆ. ಅವರು ಭೂಮಿಯನ್ನು ಕಿತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ, ನಾವು ಭೂಮಿ ಬಿಟ್ಟುಕೊಡುವ ಪ್ರಶ್ನೆಯೂ ಇಲ್ಲ. ಇದಂತೂ ಸ್ಪಷ್ಟ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ನಾವು ಕೈಗಾರಿಕೆ ವಿರೋಧಿಗಳಲ್ಲ. ಆದರೆ, ಬೆಂಗಳೂರು ಸುತ್ತಮುತ್ತಲೇ ಕಾರ್ಖಾನೆಗಳು ಏಕೆ ಬೇಕು? ಅವೈಜ್ಞಾನಿಕವಾದ ಅಭಿವೃದ್ಧಿ ತಂತ್ರವನ್ನು ಕೈ ಬಿಡಬೇಕೆಂದು ಸರಕಾರಕ್ಕೆ ಎಚ್ಚರಿಸಿ ಬಂದಿದ್ದೇವೆ. ಇದು ದೇವನಹಳ್ಳಿಯ ಚಳವಳಿ ಮಾತ್ರವಲ್ಲ. ರಾಜ್ಯ, ರಾಷ್ಟ್ರೀಯ ಚಳವಳಿಯಾಗಿದೆ. ಸರಕಾರ ನಮ್ಮ ಪರವಾಗಿ ತೀರ್ಮಾನ ತೆಗೆದುಕೊಳ್ಳದೇ ಹೋದರೆ, ನಮ್ಮ ಹೋರಾಟ ತೀವ್ರಸ್ವರೂಪ ಪಡೆದುಕೊಳ್ಳುತ್ತದೆ ಎಂದು ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ಭೂ ಸತ್ಯಾಗ್ರಹ ಹೋರಾಟದ ವೇದಿಕೆಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಪ್ರತಿನಿಧಿಗಳಾದ ಕಾರಳ್ಳಿ ಶ್ರೀನಿವಾಸ್, ನಂಜಪ್ಪ ನಲ್ಲಪ್ಪನಹಳ್ಳಿ, ಮಾರೇಗೌಡ, ಗೋಪಿನಾಥ್, ರಮೇಶ್ ಚೀಮಾಚನಹಳ್ಳಿ, ಅಶ್ವತಪ್ಪ, ಪ್ರಭಾ ಬೆಳವಂಗಲ, ರಘು, ಎಸ್.ವರಲಕ್ಷ್ಮಿ, ನೂರ್ ಶ್ರೀಧರ್, ಎಚ್.ಆರ್.ಬಸವರಾಜಪ್ಪ, ಎಸ್.ಮೀನಾಕ್ಷಿ ಸುಂದರಂ, ಡಾ.ಸಿದ್ದನಗೌಡ ಪಾಟೀಲ್, ಗುರುಪ್ರಸಾದ್ ಕೆರಗೋಡು, ಯು.ಬಸವರಾಜ, ಚುಕ್ಕಿ ನಂಜುಂಡಸ್ವಾಮಿ, ವಿ.ನಾಗರಾಜ್, ಪಿ.ಪಿ.ಅಪ್ಪಣ್ಣ, ಡಿ.ಎಚ್. ಪೂಜಾರ್, ಕೆ.ವಿ.ಭಟ್, ಮಾವಳ್ಳಿ ಶಂಕರ್, ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕಾರ ದರ್ಶನ್ ಪಾಲ್, ಯುದ್‍ವೀರ್ ಸಿಂಗ್, ರಾಕೇಶ್ ಟಿಕಾಯತ್, ಡಾ.ಸುನೀಲಮ್, ವಿಜು ಕೃಷ್ಣನ್, ನಟ ಪ್ರಕಾಶ್‍ರಾಜ್, ಪತ್ರಕರ್ತ ಇಂದೂಧರ ಹೊನ್ನಾಪುರ, ಚಿಂತಕ ಎಸ್.ಆರ್.ಹಿರೇಮಠ್ ಉಪಸ್ಥಿತರಿದ್ದರು.

ದೇಶವ್ಯಾಪಿ ಹೋರಾಟ ವಿಸ್ತರಣೆ: ರೈತರ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಕರ್ನಾಟಕ ಸರಕಾರ ಮಣಿಯದಿದ್ದರೆ, ಈ ಹೋರಾಟವನ್ನು ದೇಶವ್ಯಾಪಿ ವಿಸ್ತರಿಸಬೇಕಾಗುತ್ತದೆ. ದೇಶದ ಉದ್ದಗಲಕ್ಕೂ ಬೆಂಬಲ ಕೊಡಬೇಕಾಗುತ್ತದೆ. ಆದ್ದರಿಂದ ಸರಕಾರ ಕೂಡಲೇ ರೈತರ ಪರವಾಗಿ ಘೋಷಣೆ ಮಾಡಬೇಕು. ರೈತರ ಒಪ್ಪಿಗೆ ಇಲ್ಲದೇ ಒಂದಿಂಚು ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಬಾರದು. ರಾಹುಲ್ ಗಾಂಧಿ ದಿಲ್ಲಿಯ ಗಡಿಗಳಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದರು. ಆದರೆ, ಇಲ್ಲಿ ಸಿದ್ದರಾಮಯ್ಯ ಸರಕಾರ ಬಿಜೆಪಿ ಯಾವ ಪಾತ್ರವನ್ನು ನಿರ್ವಹಿಸಿತೋ, ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ನಡೆದುಕೊಳ್ಳುತ್ತಿದೆ. ರಾಜ್ಯದ ಜನರನ್ನು ಬೆದರಿಸುತ್ತಿದೆ, ಹೋರಾಟಗಾರರ ವಿರುದ್ಧ ಪೊಲೀಸರನ್ನು ಚೂ ಬಿಡಲಾಗುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕ ದರ್ಶನ್ ಪಾಲ್ ಹೇಳಿದರು.

ಕಂಪ್ಯೂಟರ್ ತಿಂದು ಬದುಕುತ್ತೀರಾ?: ಕಂಪ್ಯೂಟರ್ ತಿಂದು ಬದುಕುತ್ತೀರಾ? ಅನ್ನ ಕೊಡೋದು ರೈತರು. ನಾವು ರೈತರು ಹೂವು ಬೆಳೆಯುತ್ತೇವೆ, ಹಾಲು ಕರೆಯುತ್ತೇವೆ, ತರಕಾರಿ ಬೆಳೆಯುತ್ತೇವೆ, ಹಣ್ಣುಹಂಪಲು, ದ್ರಾಕ್ಷಿ ಬೆಳೆಯುತ್ತೇವೆ. ಹೀಗೆ ಎಲ್ಲ ಬೆಳೆದು ಬೆಂಗಳೂರಿಗೆ ಕಳುಹಿಸುತ್ತೇವೆ. ಇವರು ಅದನ್ನು ಅರ್ಥಮಾಡಿಕೊಳ್ಳಬೇಕು. ಕಂಪ್ಯೂಟರ್ ಮುಂದೆ ಕುಳಿತುಕೊಂಡರೆ ಏನು ಬೆಳೆಯುವುದಕ್ಕೆ ಸಾಧ್ಯ? ಬೆಂಗಳೂರು ಜನ ಏನನ್ನು ತಿನ್ನುತ್ತಾರೆ? ಇವರೇನು ಕಂಪ್ಯೂಟರ್ ಕೊಟ್ಟ ಆಹಾರ ತಿನ್ನುತ್ತಾರ? ರೈತರು ಕೊಟ್ಟ ಆಹಾರವಲ್ಲವೇ ಇವರು ತಿನ್ನೋದು! ಅದಕ್ಕೆ ಸರಕಾರ ರೈತರ ಪರ ಇರಬೇಕು ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವ್ಯಾಪ್ತಿಯ ರೈತ ಮಹಿಳೆ ಲಕ್ಷ್ಮಮ್ಮ ಸರಕಾರಕ್ಕೆ ತೀಕ್ಷ್ಣ ಪ್ರಶ್ನೆಗಳನ್ನು ಎಸೆದರು.

ನಮಗೆ ಭೂಮಿ ಉಳಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನಾವೆಲ್ಲಾ ‘ಅನ್ನರಾಮಯ್ಯ’ ಎಂದು ಕರೆಯುತ್ತೇವೆ. ಅವರು ಬಡವರಿಗೆ ಅಕ್ಕಿ ಕೊಟ್ಟರು, ಬಡವರೆಲ್ಲಾ ಊಟ ತಿಂದರು, ಗಂಜಿ ಕೊಟ್ಟರು, ಒಳ್ಳೆಯ ಕೆಲಸ ಮಾಡಿದರು. ಇವಾಗಲೂ ಹಾಗೆಯೇ ನಮಗೆ ನಮ್ಮ ಭೂಮಿ ಕೊಟ್ಟರೆ ನಮ್ಮ ರೈತರಿಗೆ ಒಂದು ಒಳ್ಳೆಯ ಕೆಲಸ ಮಾಡಿದಂಥಾಗುತ್ತದೆ. ನಾವು ಜಮೀನಿನಲ್ಲಿ ಬೆಳೆ ಬೆಳೆದು ನಾಲ್ಕು ಜನಕ್ಕೆ ಊಟ ಹಾಕುತ್ತೇವೆ. ಎಷ್ಟು ಜನ ಬಂದರೂ ಊಟ ಹಾಕುವ ಸಾಮರ್ಥ್ಯ ನಮಗಿದೆ. ನಾವು ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ. ಭೂಮಿ ನಮಗೆ ತಾಯಿ ಇದ್ದಂಗೆ ಎಂದು ರೈತ ಮಹಿಳೆ ಕಮಲಮ್ಮ ತಮ್ಮ ಬದುಕಿನ ಆಧಾರವನ್ನು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News