×
Ad

ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ | ‘ಗ್ರಾಮ ಸಂಕಲ್ಪ ಸಮಾವೇಶ’ದಲ್ಲಿ ಒಗ್ಗಟ್ಟು ಪ್ರದರ್ಶಿಸಿದ 13 ಹಳ್ಳಿಗಳ ರೈತರು

Update: 2025-07-14 19:50 IST

ಬೆಂಗಳೂರು : ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟವು ಅಂತಿಮ ಹಂತ ತಲುಪಿರುವ ಹೊತ್ತಿನಲ್ಲಿ ಭೂಮಿ ಕೊಡುವುದಾಗಿ ಕೆಲವರು ಗೊಂದಲ ಸೃಷ್ಟಿಸಿದ್ದು, ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ನಡೆದ ‘ಗ್ರಾಮ ಸಂಕಲ್ಪ ಸಮಾವೇಶ’ದಲ್ಲಿ 13 ಹಳ್ಳಿಗಳ ರೈತರು ಭೂಮಿ ಕೊಡುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ಪುನರುಚ್ಛರಿಸಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಹತ್ತು ದಿನಗಳಿಂದ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಗ್ರಾಮ ಸಭೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 13 ಹಳ್ಳಿಗಳ ಶೇ.73 ರಿಂದ ಶೇ.80 ರಷ್ಟು ರೈತರು ತಮ್ಮ ಭೂಮಿ ಕೊಡುವುದಿಲ್ಲ ಎಂದು ಸಹಿ ಮಾಡಿದ್ದಾರೆ.

ಚನ್ನರಾಯಪಟ್ಟಣ ಹೋಬಳಿಯ ಪಾಳ್ಯ ಗ್ರಾಮದ 43.14 ಎಕರೆ (ಶೇ.75), ಹರಳೂರು ಗ್ರಾಮದ 12.5 ಎಕರೆ (ಶೇ.100), ಪೋಲನಹಳ್ಳಿ 218 ಎಕರೆ (ಶೇ.71), ನಲ್ಲೂರು ಗ್ರಾಮದ 73 ಎಕರೆ (ಶೇ.70), ಮಲ್ಲೇಪುರ ಗ್ರಾಮದ 38 ಎಕರೆ (ಶೇ.100), ನಲ್ಲಪ್ಪನಹಳ್ಳಿ ಗ್ರಾಮದ 81 ಎಕರೆ (ಶೇ.76), ಚೀಮಾಚನಹಳ್ಳಿ ಗ್ರಾಮದ 97 ಎಕರೆ (ಶೇ.65), ಮಟ್ಟಬಾರ್ಲು 180 ಎಕರೆ (ಶೇ.100), ಮುದ್ದೇನಹಳ್ಳಿ ಗ್ರಾಮದ 68 ಎಕರೆ (ಶೇ.92), ಚನ್ನರಾಯಪಟ್ಟಣ ಗ್ರಾಮದ 160 ಎಕರೆ (ಶೇ.68), ಎಸ್.ತೆಲ್ಲಹಳ್ಳಿ ಗ್ರಾಮದ 77.7 ಎಕರೆ (ಶೇ.100), ಹ್ಯಾಡಾಳ ಗ್ರಾಮದ 85 ಎಕರೆ (ಶೇ.53), ಗೋಕರೆ ಬಚ್ಚೇನಹಳ್ಳಿ 139 ಎಕರೆ(ಶೇ.54) ಜಮೀನಿನ ಖಾತೆದಾರರು ಭೂಮಿ ಕೊಡುವುದಿಲ್ಲ ಎಂದು ನಿರ್ಣಯಿಸಿದ್ದಾರೆ.

ಹಿರಿಯ ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿ, ಚನ್ನರಾಯಪಟ್ಟಣದ ರೈತರಿಗೆ ಇಂದು ಇಡೀ ದೇಶದ ಬೆಂಬಲ ವ್ಯಕ್ತವಾಗುತ್ತಿದೆ. ಅಭಿವೃದ್ಧಿ ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದಕ್ಕಾಗಿ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ. ಕೆಲವು ತಜ್ಞರು ಕೂತು ಪರಿಸರದ ಬಗ್ಗೆ ‘ನಾಗರಿಕರ ವರದಿ’ ಸಿದ್ಧಪಡಿಸಿದ್ದೇವೆ. ನೈಸರ್ಗಿಕ ಸಂಪನ್ಮೂಲಗಳೇ ನಿಜವಾದ ಸಂಪತ್ತು ಎಂಬುದನ್ನು ಘೋಷಣೆ ಮಾಡಿದ್ದೇವೆ. ಪ್ರಕೃತಿಗೆ ಹತ್ತಿರವಿರುವವರು ಅದನ್ನು ನಿರ್ವಹಣೆ ಮಾಡಬೇಕು. ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಸ್ವಾರ್ಥ ರಾಜಕಾರಣಿಗಳ ಕೈಗೆ ಹೋಗಬಾರದು ಎಂದರು.

ಬಡಗಲಪುರ ನಾಗೇಂದ್ರ ಮಾತನಾಡಿ, ದೇವನಹಳ್ಳಿಯ ಚನ್ನರಾಯಪಟ್ಟಣ ಇಂದು ಇಡೀ ದೇಶಕ್ಕೆ ಪರಿಚಿತವಾಗಿದೆ. ನೈತಿಕತೆ ಹಾಗೂ ಅಸ್ಮಿತೆ ಇಟ್ಟುಕೊಂಡು ನಡೆಸಿದ ದೊಡ್ಡ ಭೂಮಿ ಹೋರಾಟ ಇದಾಗಿದೆ. ಇಷ್ಟು ದೀರ್ಘಕಾಲ ಛಲಬಿಡದೆ ಹೋರಾಟ ನಡೆಸಿಕೊಂಡು ಬಂದಿರುವುದು ಸಣ್ಣ ವಿಷಯವಲ್ಲ. ಸರಕು ಬಿಕರಿಯಾಗುತ್ತದೆ, ಬದುಕು ಬಿಕರಿಯಾಗುವುದಿಲ್ಲ; ಮಾರಾಟಗಾರರಿಗೆ ಭೂಮಿ ಕೂಡ ಒಂದು ಸರಕು. ರೈತರಿಗಲ್ಲ.

ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, 1,200 ದಿನಗಳ ದೊಡ್ಡ ಮಹಾತಪಸ್ಸು ಮಾಡಿದ್ದೀರ. ಇಂಥಹ ಧೀರ್ಘ ಹಾಗೂ ಸಾತ್ವಿಕ ತಪಸ್ಸಿಗೆ ನಾಳೆ ಒಳ್ಳೆಯ ಫಲ ಸಿಗಲೇಬೇಕು. ಎಲ್ಲ ಕಡೆ ಭೂಮಿ ಕಬಳಿಸುತ್ತಿರುವಾಗ ನಮ್ಮನ್ನು ತಡೆಯುವವರೇ ಇಲ್ಲ ಎನ್ನುತ್ತಿರುವಾಗ, ಸರಕಾರಗಳ ಅಹಂಕಾರವನ್ನು 13 ಹಳ್ಳಿಗಳ ಜನ ತಡೆದಿದ್ದಾರೆ. ಅಂತಿಮ ಅಧಿಸೂಚನೆ ಬಂದ ಬಳಿಕವೂ ಹಲವು ಜನರ ಬೆಂಬಲ ಸಿಕ್ಕಿದೆ. ಇದು 13 ಹಳ್ಳಿಗಳ ಹೋರಾಟವಲ್ಲ, ಇಡೀ ದೇಶದ ಹೋರಾಟ. ನೂರಕ್ಕೆ ನೂರು ನಾಳಿನ ಫಲಿತಾಂಶ ನಮ್ಮ ಪರವಾಗಿ ಆಗೇ ಆಗುತ್ತದೆ. ನಾಳಿನ ಸಭೆಗೆ ಎಲ್ಲ ತಾಯಂದಿರೂ ಸಿಹಿ ತನ್ನಿ, ‘ಸಿಹಿ ತಿಂದು, ಸಿಹಿ ಸುದ್ದಿ ಕೊಡಿ’ ಎಂದು ಮುಖ್ಯಮಂತ್ರಿಗಳನ್ನು ಕೇಳೋಣ ಎಂದರು.

ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಕಾರಳ್ಳಿ ಶ್ರೀನಿವಾಸ್, ರಮೇಶ್ ಚೀಮಾಚನಹಳ್ಳಿ, ಟಿ.ಯಶವಂತ್, ಮೀನಾಕ್ಷಿ ಸುಂದರಂ, ಗುರುಪ್ರಸಾದ್ ಕೆರಗೋಡು, ಕೆ.ವಿ.ಭಟ್, ಚಾಮರಸ ಪಾಟೀಲ್, ಎಚ್.ಆರ್. ಬಸವರಾಜಪ್ಪ, ಮುಖ್ಯಮಂತ್ರಿ ಚಂದ್ರು, ಇಂದಿರಾ ಕೃಷ್ಣಪ್ಪ, ದೇವಿ, ಕಾಳಪ್ಪ, ಅಪ್ಪಣ್ಣ, ಜಿ.ಜಿ. ನಾರಾಯಣಸ್ವಾಮಿ, ಆಂಜನೇಯ ರೆಡ್ಡಿ, ನಂಜಪ್ಪ ನಲ್ಲಪ್ಪನಹಳ್ಳಿ, ಮಾರೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News